Breaking News

ವಿಧಾನಸಭೆ ಚುನಾವಣೆ: 150 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಅಂತಿಮ

Spread the love

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಸಂಬಂಧ ರಾಜ್ಯಕ್ಕೆ ಆಗಮಿಸಿದ್ದ ಸ್ಕ್ರೀನಿಂಗ್‌ ಕಮಿಟಿ ಸದಸ್ಯರು, ರಾಜ್ಯ ನಾಯಕರ ಜತೆ ಸಮಾಲೋಚನೆ ಪೂರ್ಣಗೊಳಿಸಿದ್ದು 150 ಕ್ಷೇತ್ರಗಳಿಗೆ ಒಂದೊಂದೇ ಹೆಸರಿನ ಪಟ್ಟಿ ಸಿದ್ಧಗೊಳಿಸಿದೆ.

 

224 ಕ್ಷೇತ್ರಗಳ ಪೈಕಿ ಒಂದೊಂದೇ ಹೆಸರು ಇರುವ 150 ಕ್ಷೇತ್ರಗಳ ಪಟ್ಟಿ ಮೊದಲ ಹಂತದಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದ್ದು ಫೆಬ್ರವರಿ ಕೊನೆಯ ವಾರ ಕೇಂದ್ರ ಚುನಾವಣ ಸಮಿತಿ ಸಭೆ ಸೇರಿ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

40 ಕ್ಷೇತ್ರಗಳಿಗೆ ಎರಡೆರಡು ಹೆಸರು ಇದ್ದು, 34 ಕ್ಷೇತ್ರಗಳಿಗೆ ನಾಲ್ಕು ಆಕಾಂಕ್ಷಿಗಳಿದ್ದು ಅಂತಹ ಕ್ಷೇತ್ರಗಳಲ್ಲಿ ಒಮ್ಮತದ ಆಯ್ಕೆ ಕಗ್ಗಂಟಾಗುವ ಲಕ್ಷಣಗಳು ಕಂಡುಬರುತ್ತಿವೆ.

ಈ ಮಧ್ಯೆ ಹಾಲಿ ಶಾಸಕರು ಇರುವ ಪಾವಗಡ, ಶಿಡ್ಲಘಟ್ಟ, ಗುರುಮಿಟ್ಕಲ್‌, ಕುಂದಗೋಳ ಕ್ಷೇತ್ರಗಳಲ್ಲೂ ಅಭ್ಯರ್ಥಿ ಬದಲಾವಣೆಗೆ ಆಗ್ರಹ ಕೇಳಿ ಬಂದಿದ್ದು, ಹಲವು ಹೆಸರುಗಳು ಚರ್ಚೆಯಾಗಿವೆ. ಪಾವಗಡದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್‌, ಗೆಲುವಿನ ದೃಷ್ಟಿಯಿಂದ ದಲಿತ (ಎಡಗೈ) ಸಮುದಾಯಕ್ಕೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಧ್ರುವನಾರಾಯಣ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌. ಮುನಿಯಪ್ಪ, ರೆಹಮಾನ್‌ ಖಾನ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಸೇರಿ ರಾಜ್ಯದ ಪ್ರಮುಖ ನಾಯಕರ ಜತೆ ಸಮಾಲೋಚನೆ ನಡೆಸಿದ ಸ್ಕ್ರೀನಿಂಗ್‌ ಕಮಿಟಿ ಅಧ್ಯಕ್ಷ ಮೋಹನ್‌ ಪ್ರಕಾಶ್‌ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮಂಗಳವಾರ ತಡರಾತ್ರಿ ಮತ್ತೊಮ್ಮೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಹರಿಪ್ರಸಾದ್‌, ಪರಮೇಶ್ವರ್‌, ಎಂ.ಬಿ. ಪಾಟೀಲ್‌ ಜತೆ ಪ್ರತ್ಯೇಕ ಮಾತುಕತೆ ಸಹ ನಡೆಸಿದರು. ರಾಜ್ಯ ನಾಯಕರ ಜತೆಗಿನ ಚರ್ಚೆ, ಸಲಹೆ-ಅಭಿಪ್ರಾಯಗಳ ಬಗ್ಗೆ ಸ್ಕ್ರೀನಿಂಗ್‌ ಕಮಿಟಿ ಎಐಸಿಸಿಗೆ ವರದಿ ನೀಡಲಿದ್ದು, ಈಗಾಗಲೇ ಕೆಪಿಸಿಸಿ ಸಲ್ಲಿಸಿರುವ ಶಿಫಾರಸು ಪಟ್ಟಿಯ ಬಗ್ಗೆಯೂ ಅಭಿಪ್ರಾಯ ಸಲ್ಲಿಸಲಿದೆ. ಅಂತಿಮವಾಗಿ ಎಐಸಿಸಿ ನಡೆಸಿರುವ ಸಮೀಕ್ಷೆ ಪ್ರಕಾರವೇ ಟಿಕೆಟ್‌ ಸಿಗಲಿದೆ ಎಂದು ಹೇಳಲಾಗಿದೆ.

25 ಟಿಕೆಟ್‌ಗೆ ಬೇಡಿಕೆ
ಮುಸ್ಲಿಂ ಸಮುದಾಯ ಕೂಡ 25 ಟಿಕೆಟ್‌ಗೆ ಬೇಡಿಕೆ ಇಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ಅವರನ್ನು ಭೇಟಿ ಮಾಡಿದ್ದ ಜಮೀರ್‌ ಅಹಮದ್‌, ನಸೀರ್‌ ಅಹಮದ್‌, ಯು.ಟಿ. ಖಾದರ್‌, ಸಲೀಂ ಅಹಮದ್‌ ನೇತೃತ್ವದ ನಿಯೋಗ ಈ ಬಾರಿ 25 ಮಂದಿಗೆ ಅವಕಾಶ ಕೊಡುವಂತೆ ಕೋರಿದೆ. ಬೆಂಗಳೂರಿನಲ್ಲಿ ಐದು ಕಡೆ ಟಿಕೆಟ್‌ ನೀಡುವಂತೆಯೂ ಕೋರಿದೆ.

ಸಿದ್ದುಗೆ ದುಂಬಾಲು
ದಯಮಾಡಿ ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಅಲ್ಲಿನ ಅಭಿಮಾನಿಗಳು, ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. 500ಕ್ಕೂ ಹೆಚ್ಚು ವಾಹನಗಳಲ್ಲಿ ಬಾದಾಮಿಯಿಂದ ಬೆಂಗಳೂರಿಗೆ ಬಂದಿದ್ದ ಅಭಿಮಾನಿಗಳು, ಸಿದ್ದರಾಮಯ್ಯರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಬಾದಾಮಿ ದೂರ ಎಂಬ ಕಾರಣಕ್ಕೆ

ಕೋಲಾರದಲ್ಲಿ ಸ್ಪರ್ಧಿಸಲು ಬಯಸಿದ್ದೇನೆ ಎಂದರು. ಈ ಮಧ್ಯೆ, ಸಿದ್ದರಾಮಯ್ಯ ಬಾದಾಮಿ ಮತ್ತು ಕೋಲಾರ ಎರಡೂ ಕಡೆಯಿಂದಲೂ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಲಿಂಗಾಯತರಿಗೆ ಹೆಚ್ಚು ಟಿಕೆಟ್‌ ಕೊಡಿ
ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್‌ ನೀಡಿದರೆ ಕಾಂಗ್ರೆಸ್‌ ಜತೆ ನಿಲ್ಲಲಿದೆ ಎಂದು ಹೈಕಮಾಂಡ್‌ ಮುಂದೆ ಪ್ರತಿಪಾದಿಸಲು ವೀರಶೈವ -ಲಿಂಗಾಯತ ನಾಯಕರು ತೀರ್ಮಾನಿಸಿದ್ದಾರೆ.

ಮಂಗಳವಾರ ಸಮುದಾಯದ ಪ್ರಮುಖ ನಾಯಕರು ಸಭೆ ಸೇರಿ ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಮುಂಚೂಣಿಯಲ್ಲಿ ಇರದ ಕಾರಣ ವೀರಶೈವ-ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ನತ್ತ ಸೆಳೆಯಬಹುದಾಗಿದೆ. ಆದರೆ ಟಿಕೆಟ್‌ ನೀಡುವಿಕೆಯಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಕ್ಕರೆ ಸಮುದಾಯಕ್ಕೂ ವಿಶ್ವಾಸ ಮೂಡಲಿದೆ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹೆಚ್ಚು ಶಾಸಕರು ಆಯ್ಕೆಯಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ಅವಕಾಶವೂ ಸಿಗಬಹುದು. ವೀರೇಂದ್ರ ಪಾಟೀಲ್‌ ಅನಂತರ ಇದುವರೆಗೆ ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ, ಈ ಬಾರಿ ಅವಕಾಶ ಒದಗಿಬರಬಹುದು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ