ಬೆಂಗಳೂರು: ವಿಧಾನಸಭೆ ಚುನಾವಣೆಗೆ ರೂಪುರೇಷೆ ಸಿದ್ಧಪಡಿಸುತ್ತಿರುವ ಚುನಾವಣಾ ಆಯೋಗ, ರಾಜ್ಯದ ವಲಯವಾರು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸುತ್ತಿದೆ.
ಮೈಸೂರು, ಕಲಬುರಗಿಯಲ್ಲಿ ಒಂದು ಸುತ್ತಿನ ಸಭೆ ನಡೆಸಿರುವ ಆಯೋಗದ ಅಧಿಕಾರಿಗಳು, ಚುನಾವಣೆ ಸಿದ್ಧತೆ ಕೆಲಸ ಆರಂಭಿಸುವಂತೆ ಜಿಲ್ಲಾಧಿಕಾರಿಗಳು, ಎಸ್‌ಪಿಗಳು ಹಾಗೂ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಕಮಿಷನರ್ ಹಾಗೂ ಕಮಿಷನರೇಟ್ ವ್ಯಾಪ್ತಿಯ ಡಿಸಿಪಿಗಳ ಜೊತೆ ಶುಕ್ರವಾರ ಸಭೆ ನಡೆಸಿದ ಆಯೋಗ, ಮತಗಟ್ಟೆ ಹಂತದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.
‘ಸರ್ಕಾರದ ಆಡಳಿತ ಅವಧಿ ಐದು ವರ್ಷ ಮುಗಿಯುವುದಕ್ಕೂ ಆರು ತಿಂಗಳ ಮೊದಲೇ ಚುನಾವಣೆ ಕೆಲಸಗಳನ್ನು ಆರಂಭಿಸಬೇಕೆಂಬ ಮಾರ್ಗಸೂಚಿ ಇದೆ. ಇದರ ಭಾಗವಾಗಿ ಆಯೋಗದ ಅಧಿಕಾರಿಗಳು, ವಲಯವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಚುನಾವಣೆ ಅಖಾಡ ಸಜ್ಜಾಗುತ್ತಿದ್ದು, ನಮ್ಮ ಇಲಾಖೆಯಿಂದಲೂ ಪೂರ್ವತಯಾರಿ ಆರಂಭಿಸಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ಚುನಾವಣೆ ವೇಳೆ ಸಂಭವಿಸಿದ್ದ ಘಟನೆಗಳನ್ನು ಸಭೆಯಲ್ಲಿ ಮೆಲುಕು ಹಾಕಲಾಯಿತು. ಮುಂಬರುವ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಬಿಗಿಗೊಳಿಸಲು ಏನೆಲ್ಲ ಕ್ರಮ ಕೈಗೊಳ್ಳಬಹುದೆಂದು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು’ ಎಂದರು.