ಕೋಝಿಕ್ಕೋಡ್ : ಇತ್ತೀಚೆಗೆ ಗರ್ಭಿಣಿ ಎಂದು ಘೋಷಿಸಿದ ಕೇರಳದ ತೃತೀಯಲಿಂಗಿ ದಂಪತಿಗಳು ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನು ಪಡೆದಿದ್ದಾರೆ, ಇದು ದೇಶದಲ್ಲೇ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ.
“ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಬೆಳಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು” ಎಂದು ತೃತೀಯಲಿಂಗಿ ದಂಪತಿಗಳಲ್ಲಿ ಒಬ್ಬರಾದ ಜಿಯಾ ಪಾವಲ್ ಪಿಟಿಐಗೆ ತಿಳಿಸಿದ್ದಾರೆ.
ಮಗು ಮತ್ತು ಮಗುವಿಗೆ ಜನ್ಮ ನೀಡಿದ ಆಕೆಯ ಸಂಗಾತಿ ಜಹ್ಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪಾವಲ್ ಹೇಳಿದ್ದಾರೆ. ಆದಾಗ್ಯೂ, ನವಜಾತ ಶಿಶುವಿನ ಲಿಂಗದ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಅದನ್ನು ಸಾರ್ವಜನಿಕಗೊಳಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಜಿಯಾ ಪಾವಲ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಲ್ಲಿ ಜಹಾದ್ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದರು “ನಾವು ನನ್ನ ತಾಯಿಯಾಗುವ ಕನಸು ಮತ್ತು ತಂದೆಯಾಗುವ ಅವರ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ವಯಸ್ಸಿನ ಭ್ರೂಣವು ಈಗ ಜಹಾದ್‌ನ ಹೊಟ್ಟೆಯಲ್ಲಿದೆ. ನಮಗೆ ತಿಳಿದುಬಂದ ಪ್ರಕಾರ, ಇದು ಭಾರತದಲ್ಲಿ ಮೊದಲ ಟ್ರಾನ್ಸ್ ಮ್ಯಾನ್‌ನ ಗರ್ಭಧಾರಣೆ.” ಎಂದು ಪಾವಲ್ ಪೋಸ್ಟ್‌ನಲ್ಲಿ ಹೇಳಿದ್ದರು. ಪಾವಲ್ ಮತ್ತು ಜಹಾದ್ ಕಳೆದ ಮೂರು ವರ್ಷಗಳಿಂದ ಜೊತೆಯಾಗಿದ್ದಾರೆ.