ಅಥಣಿ: ತಾಲ್ಲೂಕಿನ ಘಟನಟ್ಟಿ ಕ್ರಾಸ್ ಸಮೀಪ ಶನಿವಾರ ಕ್ರೂಸರ್ ಹಾಗೂ ಗೂಡ್ಸ್ ಲಾರಿ ಮಧ್ಯೆ ಮುಖಾ-ಮುಖಿ ಡಿಕ್ಕಿ ಸಂಭವಿಸಿ, ಒಬ್ಬ ವೃದ್ಧೆ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಯವರಾದ ದೇವಕಿ ನಿಂಗಣ್ಣ ಕಿಚಡಿ (65) ಮೃತಪಟ್ಟವರು.
ಈ ಕ್ರೂಸರ್‌ನಲ್ಲಿ 10 ಮಂದಿ ಯಲ್ಲಮ್ಮನ ಗುಡ್ಡಕ್ಕೆ ದರ್ಶನಕ್ಕೆ ಬಂದಿದ್ದರು. ಶನಿವಾರ ದೇವಿ ದರ್ಶನ ಮಾಡಿಕೊಂಡು ಮರಳಿ ಸಿಂದಗಿ ಕಡೆಗೆ ಹೊಟರಿದ್ದರು.
ಅಥಣಿ ಮಾರ್ಗವಾಗಿ ಬರುತ್ತಿದ್ದ ಗೂಡ್ಸ್ ಲಾರಿ ಹಾಗೂ ನಂದಗಾವ ಗ್ರಾಮದ ಕಡೆ ಸಾಗುತ್ತಿದ್ದ ಕ್ರೂಸರ್ ಘಟನಟ್ಟಿ ಬಳಿ ಪರಸ್ಪರ ಡಿಕ್ಕಿ ಹೊಡೆದವು. ವಾಹನಗಳು ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಅಥಣಿಯ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಥಣಿ ಪಟ್ಟಣ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ಯ ಮಾರಾಟ: ಐವರ ಬಂಧನ
ಉಗರಗೋಳ: ಇಲ್ಲಿನ ಯಲ್ಲಮ್ಮನಗುಡ್ಡದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಐದು ಕಡೆಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಶನಿವಾರ ದಾಳಿ ನಡೆಸಿ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 23.85 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಯಲ್ಲಮ್ಮನಗುಡ್ಡದ ತಾಂಡಾದ ಸಂಗೀತಾ ಲಮಾಣಿ, ಸಚಿನ್ ಲಮಾಣಿ, ನಾಗೇಶ ಲಮಾಣಿ, ಕುರವಿನಕೊಪ್ಪದ ಮಹಾದೇವಪ್ಪ ಮಾದರ, ಕಾರ್ಲಕಟ್ಟಿ ತಾಂಡಾದ ವಿಠ್ಠಲ ಕಾರಬರಿ ಬಂಧಿತರು.
‘ಯಲ್ಲಮ್ಮನಗುಡ್ಡದಲ್ಲಿ ಮದ್ಯ ಮಾರಾಟ ಮಾಡದಂತೆ ನಿಗಾ ಇರಿಸಿದ್ದು, ಸಂಶಯ ಕಂಡುಬಂದಲ್ಲಿ ತ್ವರಿತವಾಗಿ ದಾಳಿ ನಡೆಸುತ್ತಿದ್ದೇವೆ. ಗುಡ್ಡದ ಪರಿಸರದಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಸಾರ್ವಜನಿಕರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಎಸ್ಪಿ ಡಾ.ಸಂಜೀವ್ ಪಾಟೀಲ ಕೋರಿದ್ದಾರೆ.
ಅಪಘಾತ: ಸಾವು
ಬೈಲಹೊಂಗಲ: ಸಮೀಪದ ಯರಡಾಲ ಕ್ರಾಸ್ ಹತ್ತಿರ ಜ.20ರಂದು ಬೈಕ್ ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ, ಶನಿವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ನಾಲ್ಕನೇ ಅಡ್ಡ ರಸ್ತೆಯ ನಿವಾಸಿ ಕಿರಣ ಬಸಯ್ಯಾ ಮಠಪತಿ (25) ಮೃತ ಯುವಕ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.