ಬೈಲಹೊಂಗಲ: ‘ಬೆಳಗಾವಿ ಅಪ್ಪಟ ಕನ್ನಡ ಕೇಂದ್ರ. ಈ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕನ್ನಡ ಭಾಷೆಯ ಉಳಿವು, ಪ್ರಸಾರ ಬೆಳವಣಿಗೆಯಲ್ಲಿ ಈ ನಾಡಿನ ಜನತೆ ಸದಾ ಮುಂಚೂಣಿಯಲ್ಲಿದ್ದಾರೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಅನ್ಯಭಾಷೆಗಳ ಆಕ್ರಮಣವನ್ನು ತಗ್ಗಿಸಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಶಾಂತಿನಾಥ ದಿಬ್ಬದ ಹೇಳಿದರು.
ತಾಲ್ಲೂಕಿನ ದೇವಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ರಾಜ್ಯದ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ಮತ್ತು ಸಂವಧ೯ನೆಗಾಗಿ ಎಲ್ಲರೂ ಸಂಘಟಿತರಾಗಿ, ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು’ ಎಂದರು.
‘ಸರ್ಕಾರ ಕನ್ನಡ ಭಾಷೆ ಬಳಕೆಯ ವಿಷಯದಲ್ಲಿ ಇನ್ನೂ ಕೆಲವು ಕಠೋರ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಬೆಳಗಾವಿ ನಮ್ಮದು ಎಂಬುದನ್ನು ಕಾನೂನು ರೀತಿಯಲ್ಲಿ ಸಾಧಿಸಬೇಕು. ಈ ಭಾಗದ ನೀರಾವರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು’ ಎಂದು ಹೇಳಿದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಉಳ್ಳೇಗಡ್ಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಪರಿಷತ್ತಿನ ಧ್ವಜಾರೊಹಣ ನೆರವೇರಿಸಿದರು.