ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತ್ತಿದೆ.
ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೆ ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಘೋಷಣೆ ಮಾಡುವುದು ಒಂದು ಬಾಕಿ ಇದೆ. ಟಿಕೆಟ್ ಹಂಚುವ ವಿಚಾರವಾಗಿ ಕಮಲ (BJP) ಹೈಕಮಾಂಡ್ ನಾಯಕರು ಗುಜರಾತ ಮಾದರಿ ಅನುಸರಿಸುತ್ತಾರೆ ಎಂಬ ಮಾತುಗಳು ಕೇಳಿ ಬರತ್ತಿದೆ. ಬಿಜೆಪಿ ಹೈಕಮಾಂಡ್ ಟಿಕೆಟ್ ಹಂಚಿಕೆ ವಿಚಾರವಾಗಿ ಈಗಾಗಲೆ ಗೆದ್ದಿರುವ ಮತ್ತು ಸೋತಿರುವ ಕ್ಷೇತ್ರಗಳಲ್ಲಿ ಸ್ಟ್ರಾಟಜಿ ಟೀಂ ಮೂಲಕ ಸರ್ವೆ ಮಾಡಿಸಿದೆ. ಬಿಜೆಪಿ ಪಾಲಿಗೆ ಸರ್ವೆಯಲ್ಲಿ ಆಘಾತಕಾರಿ ಅಂಶವೊಂದು ಬಹಿರಂಗಗೊಂಡಿದೆ. ಈ ಪೈಕಿ 10ಕ್ಕೂ ಹೆಚ್ಚು ಬಿಜೆಪಿಯ ಹಾಲಿ ಶಾಸಕರು ಸೋಲುವ ಮಾಹಿತಿ ದೊರೆತಿದೆ.
ಹೀಗಾಗಿ ಹೈಕಮಾಂಡ್ ಈ ಕ್ಷೇತ್ರಗಳಲ್ಲಿ ಹೊಸ ಪ್ರಯೋಗದ ಬಗ್ಗೆ ಚಿಂತಿಸುತ್ತಿದೆ. ಕಳೆದ ಬಾರಿ ಸೋತಿರುವ, ಗೆದ್ದಿರುವ ಬದಲಾಗಿ 3ನೇ ಅಭ್ಯರ್ಥಿ ಬಗ್ಗೆ ಚಿಂತನೆ ನಡೆಸಿದೆ. ಕಳೆದ ಬಾರಿ ಸೋತಿರುವ ಮತ್ತು ಗೆದ್ದಿರುವ ಕ್ಷೇತ್ರಗಳ ಪೈಕಿ ಈ ಬಾರಿ 20 ರಿಂದ 25 ಕ್ಷೇತ್ರಗಳು ಮತ್ತೆ ಸೋಲುವ ಮಾಹಿತಿ ಬಹಿರಂಗವಾಗಿದೆ. ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಕನಿಷ್ಠ ಮೂರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.