ಬೆಳಗಾವಿ: ಇಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನವು ಸ್ತ್ರೀ ಸಂವೇದನೆಗಳಿಗೆ ಕನ್ನಡಿ ಹಿಡಿಯಿತು.
ಮೊದಲ ದಿನದ ಗೋಷ್ಠಿಗಳಲ್ಲಿ ಕಾವ್ಯಗಳನ್ನು ಪ್ರಸ್ತುತಪಡಿಸಿದ ವಿವಿಧ ರಾಜ್ಯಗಳ ಕವಯತ್ರಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯಗಳನ್ನು ಖಂಡಿಸಿದರು.
ಪುರುಷರು ಮತ್ತು ಮಹಿಳೆಯರ ಮಧ್ಯೆ ಇರುವ ಅಸಮಾನತೆ ನಿವಾರಣೆ, ಮಹಿಳಾ ಸಬಲೀಕರಣದ ಬಗ್ಗೆಯೂ ದನಿ ಎತ್ತಿದರು. ಮಹಿಳೆಯರ ಅಂತಃಶಕ್ತಿಯಾಗಿರುವ ಪ್ರೀತಿ, ಪ್ರೇಮ, ಕರುಣೆ, ಸಹನೆ ಮೇಲೂ ಹಲವರು ಬೆಳಕು ಚೆಲ್ಲಿದರು. ಕನ್ನಡ ಕಾವ್ಯಧಾರಾ ಕವಿಗೋಷ್ಠಿಯಲ್ಲಿ ಆಶಾ ಕಡಪಟ್ಟಿ, ಬಹುಭಾಷಾ ಕಾವ್ಯಧಾರಾ ಗೋಷ್ಠಿಯಲ್ಲಿ ಪ್ರೊ.ಫಮೆಲಿನಾ ಮಾರಕ್ ಅಧ್ಯಕ್ಷತೆ ವಹಿಸಿದ್ದರು.
2012ರಲ್ಲಿ ಹುಬ್ಬಳ್ಳಿಯಲ್ಲಿ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ನಡೆದಿತ್ತು. ದಶಕದ ನಂತರ ಕರ್ನಾಟಕಕ್ಕೆ ಮತ್ತೆ ಅವಕಾಶ ಸಿಕ್ಕಿದ್ದು, ಈ ಸಮ್ಮೇಳನದಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ಕಲೆ, ಸಂಸ್ಕೃತಿ ಅನಾವರಣಗೊಂಡವು.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ಪಂಜಾಬ್, ಜಮ್ಮು-ಕಾಶ್ಮೀರ ಮತ್ತಿತರ ರಾಜ್ಯಗಳಿಂದ 250ಕ್ಕೂ ಅಧಿಕ ಕವಯತ್ರಿಯರು ಶುಕ್ರವಾರವೇ ಕುಂದಾನಗರಿಗೆ ಬಂದಿಳಿದಿದ್ದಾರೆ. ಈ ಪೈಕಿ ಹಲವರು ಶನಿವಾರ ಸಾಂಪ್ರದಾಯಿಕ ವೇಷಭೂಷಣದಲ್ಲೇ, ಡಾ.ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆಯ ಸಭಾಂಗಣದತ್ತ ಹೆಜ್ಜೆಹಾಕಿ ಗಮನಸೆಳೆದರು. ತಾಯ್ನಾಡಿನ ಪರ ಜೈಕಾರ ಹಾಕುವ ಜತೆಗೆ, ಕನ್ನಡಾಂಬೆಗೂ ಜೈ ಎಂದರು.