ಬೆಳಗಾವಿ: ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂದು ಕೇಂದ್ರ ಸರ್ಕಾರ ಆಂದೋಲನ ಆರಂಭಿಸಿದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ನಮ್ಮ ಮನೆಯ ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು ಪ್ರತಿಪಾದಿಸಿದರು.
ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೆಚ್ಚುವರಿ ನ್ಯಾಯಾಲಯ ಕಟ್ಟಡದ (ನೆಲಮಹಡಿ) ಉದ್ಘಾಟನೆ, ವಕೀಲರ ಭವನದ ಎರಡನೇ ಮಹಡಿ ನಿರ್ಮಾಣ, ಖಾನಾಪುರ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣ ಮತ್ತು ರಾಮದುರ್ಗ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಆಯಸಿಡ್ ದಾಳಿಯಂತಹ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ, ಮಹಿಳೆಯರ ಜತೆಗೆ ಘನತೆಯಿಂದ ವರ್ತಿಸುವುದನ್ನು ನಮ್ಮ ಹುಡುಗರಿಗೆ ಕಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ವಕೀಲರು ಶ್ರಮವಹಿಸಿ ದುಡಿಯಬೇಕು. ಕೆಲಸದ ಮೂಲಕವೇ ಸಮಾಜಕ್ಕೆ ನಿಮ್ಮ ಪ್ರಾಮುಖ್ಯತೆ ಮನವರಿಕೆ ಮಾಡಿಕೊಡಬೇಕು. ಸರ್ಕಾರ ನ್ಯಾಯಾಂಗ ವ್ಯವಸ್ಥೆಗೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದೆ. ಪ್ರತಿ ಬೇಡಿಕೆಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ’ ಎಂದರು. ಬೆಳಗಾವಿ
ಜಿಲ್ಲೆಯ ಜತೆಗಿನ ತಮ್ಮ ಒಡನಾಟ ಸ್ಮರಿಸಿದರು.