ವಿಜಯಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಗೆ ಮತ್ತೊಂದು ಆಘಾತವಾಗಿದೆ. ಜೆಡಿಎಸ್ ಅಭ್ಯರ್ಥಿ, ಮಾಜಿ ಯೋಧ ಶಿವಾನಂದ ಸೋಮನಾಳ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರದಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಿವಾನಂದ ಸೋಮನಾಳ (55) ಪಂಚರತ್ನ ರಥಯಾತ್ರೆ ಬಳಿಕ ತಮ್ಮ ಕ್ಷೇತ್ರ ಸಿಂದಗಿಗೆ ತೆರಳಿದ್ದರು. ಪರಿಚಯಸ್ಥರ ಮನೆಯಲ್ಲಿ ಕುಳಿತಿದ್ದ ಶಿವಾನಂದ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ.ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಶಿವಾನಂದ ಸೋಮನಾಳ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದರು.