ಹುಬ್ಬಳ್ಳಿ: ಚುನಾವಣೆ ಘೋಷಣೆಯಾಗುವ ಮೊದಲೇ ಉತ್ತರ ಕರ್ನಾಟಕ ಭಾಗದತ್ತ ಎಲ್ಲ ರಾಜಕೀಯ ಪಕ್ಷಗಳು ದಾಂಗುಡಿ ಇಡುತ್ತಿದ್ದು, ಎಲ್ಲ ಹಿರಿಯ ನಾಯಕರ ಕಣ್ಣು ಇತ್ತಲೇ ನೆಟ್ಟಿದೆ.
ಕಳೆದ ಒಂದು ವಾರದಲ್ಲಿ ಉತ್ತರ ಕರ್ನಾಟಕವನ್ನೇ ಕೇಂದ್ರೀಕರಿಸಿಕೊಂಡಿರುವ ರಾಜಕೀಯ ನೇತಾರರರು ಪ್ರಚಾರ ರ್ಯಾಲಿಯಲ್ಲಿ ತೊಡಗಿದ್ದಾರೆ.
ಗುರುವಾರವಂತೂ ಮೂರೂ ರಾಜಕೀಯ ಪಕ್ಷಗಳ ಘಟಾನುಘಟಿಗಳು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರಿಗೂ ಈ ಭಾಗ ಪ್ರತಿಷ್ಠೆಯ ಕಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕದಲ್ಲಿ ಅಬ್ಬರದ ಹವಾ ಎಬ್ಬಿಸಿದ್ದರು. ಈ ಮೂಲಕ ಖರ್ಗೆ ನೆಲದಲ್ಲಿಯೇ ಕಾಂಗ್ರೆಸ್‌ಗೆ ಅಭಿವೃದ್ಧಿಯ ಸವಾಲು ಎಸೆದರು.
ಹಾವೇರಿಯಲ್ಲಿ ಕಾಂಗ್ರೆಸ್ ತನ್ನ ಜನಧ್ವನಿ ಯಾತ್ರೆಯನ್ನು ಮುಂದುವರೆಸಿದೆ. ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು. ಕೇಂದ್ರ, ರಾಜ್ಯ ಸರ್ಕಾರಗಳು ಡಂಬಲ್ ಎಂಜಿನ್ ಸರ್ಕಾರವಲ್ಲ. ಬದಲಾಗಿ ಡಬ್ಟಾ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.