Breaking News

ಬೆಳಗಾವಿ | ಮತಾಂತರ ಶಂಕೆ: ಪಾದ್ರಿ, ಆದಿವಾಸಿಗಳ ಮೇಲೆ ಹಿಂದುತ್ವ ಸಂಘಟನೆಯ ದಾಳಿ

Spread the love

ಬೆಳಗಾವಿ: ಕ್ರೈಸ್ತ ಪಾದ್ರಿಯೊಂದಿಗೆ ಗೋವಾಗೆ ತೆರಳುತ್ತಿದ್ದ ಮಹಾರಾಷ್ಟ್ರದ 40 ಜನ ಆದಿವಾಸಿಗಳನ್ನು ಇಲ್ಲಿನ ಪೊಲೀಸರು, ಮರಳಿ ಕೊಲ್ಹಾ‍ಪುರಕ್ಕೆ ಕಳುಹಿಸಿದರು. ಇವರನ್ನು ಮತಾಂತರಕ್ಕೆ ಕರೆದೊಯ್ಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.

 

ಮಹಾರಾಷ್ಟ್ರದ ಈ ಬುಡಕಟ್ಟು ಜನರನ್ನು ಮತಾಂತರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ, ಸಾಂಗ್ಲಿಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾತ್ರಿ ಪಾದ್ರಿ ಮೇಲೆ ಹಲ್ಲೆ ನಡೆಸಿದ್ದರು. ಅವರಿಂದ ತಪ್ಪಿಸಿಕೊಂಡ ಪಾದ್ರಿ ಹಾಗೂ ಬುಡಕಟ್ಟು ಜನರು ಬೆಳಗಾವಿ ಮಾರ್ಗವಾಗಿ ಗೋವಾಗೆ ಹೊರಟಿದ್ದರು. ಬೆಳಗಾವಿಯಲ್ಲೂ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿ, ವಾಪಸ್‌ ಕಳುಹಿಸಿಕೊಟ್ಟರು.

ಇವರೆಲ್ಲರೂ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರದವರು. ಶಿರಪುರದ ವಿಶ್ವ ಮಂಡಲ ಸೇವಾಶ್ರಮದ ಪಾದ್ರಿ ಕಾನ್ಸ್ಟಿ ನೇತೃತ್ವದಲ್ಲಿ ಸೋಮವಾರ ಗೋವಾಗೆ ಪ್ರಯಾಣ ಬೆಳೆಸಿದ್ದರು. ಮನ್ಮಾಡ್‌ ನಿಲ್ದಾಣದಲ್ಲಿ ರೈಲು ಹತ್ತಿದ ಅವರು ರಾತ್ರಿ ಸಾಂಗ್ಲಿಗೆ ಬಂದಿದ್ದರು. ಆಗ, ಹಿಂದೂ ಸಂಘಟನೆಯ ಕಾರ್ಯಕರ್ತರು ಈ ತಂಡದ ಮೇಲೆ ಹಲ್ಲೆ ನಡೆಸಿದ್ದರು.

‘ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಕರೆದೊಯ್ಯಲಾಗುತ್ತಿದೆ ಎಂಬ ಸಂಶಯದಿಂದ ಅವರು ದಾಳಿ ನಡೆಸಿದರು. ಕೆಲವು ಆದಿವಾಸಿಗಳು ಹಾಗೂ ಪಾದ್ರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ತಂಡದಲ್ಲಿದ್ದವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಾಂಗ್ಲಿಯಲ್ಲಿ ನಡೆದ ಘಟನೆಯ ಬಗ್ಗೆ ಪಾದ್ರಿ ಕಾನ್ಸ್ಟಿ, ಅವರು ಬೆಳಗಾವಿಯ ಕ್ರೈಸ್ತ ಧರ್ಮಗುರುಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಅವರು ಇಲ್ಲಿನ ಕ್ಯಾಂಪ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದರು.

ಘಟನೆ ಬಳಿಕ ಪಾದ್ರಿ ಹಾಗೂ ಆದಿವಾಸಿಗಳು ಅದೇ ರೈಲಿನ ಮೂಲಕ ಮಂಗಳವಾರ ಬೆಳಿಗ್ಗೆ ಬೆಳಗಾವಿಗೆ ಬಂದು ತಲುಪಿದರು. ತ್ವೇಷಮಯ ವಾತಾವರಣ ಹಿನ್ನೆಲೆಯಲ್ಲಿ, ನಗರದ ಪೊಲೀಸರು ಎಲ್ಲ ಆದಿವಾಸಿಗಳನ್ನೂ ವಿಶೇಷ ಬಸ್‌ನಲ್ಲಿ ಮರಳಿ ಕೊಲ್ಹಾಪುರಕ್ಕೆ ಕಳುಹಿಸಿದರು.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾದ್ರಿ ಕಾನ್ಸ್ಟಿ, ‘ನಮ್ಮದು ಸರ್ಕಾರೇತರ ಸಂಸ್ಥೆಯಾಗಿದ್ದು, ಶಾಲೆ ನಡೆಸುತ್ತಿದ್ದೇವೆ. ಇಲ್ಲಿ ಬುಡಕಟ್ಟು ಜನಾಂಗದವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ಬುಡಕಟ್ಟು ಜನಾಂಗದ ಶಿಕ್ಷಕರನ್ನು ಪ್ರವಾಸಕ್ಕೆ ಕರೆದೊಯ್ಯುತ್ತೇವೆ. ಈ ಬಾರಿಯೂ ಗೋವಾಕ್ಕೆ ಪ್ರವಾಸಕ್ಕೆಂದು ಹೊರಟಿದ್ದಾಗ, ಹಿಂದೂ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ದಾಳಿ ನಡೆಸಿದ್ದಾರೆ. ನಾವು ಯಾರನ್ನೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿಲ್ಲ’ ಎಂದು ತಿಳಿಸಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ