ಬಾಗಲಕೋಟೆ: ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಫೈಟರ್ ರವಿ, ಪಿಂಪ್ ರವಿ, ಸಿ.ಟಿ. ರವಿ ಹೀಗೆ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಅಂತಹ ರವಿಗಳಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪಿಂಪ್ ಕೆಲಸ ಮಾಡಿಯೇ ಸಚಿವರಾಗಿದ್ದಾರೆ ಎಂದು ಒಬ್ಬ ಬಿಜೆಪಿಯ ಶಾಸಕರು ಹೇಳುತ್ತಾರೆ.
ಶಾಸಕ ಯತ್ನಾಳ್ ಹೇಳಿಕೆಗೆ ಉತ್ತರ ಕೊಡಲು ಬಿಜೆಪಿಯಲ್ಲಿ ಒಬ್ಬ ಗಂಡಸೂ ಇಲ್ವಾ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾದಾಗಿನಿಂದ ಹಿಡಿದು ಒಂದು ಸಿದ್ಧಾಂತದೊಂದಿಗೆ ಬೆಳೆದು ಬಂದಿದ್ದೇನೆ. ಪಕ್ಷ ಬದಲಿಸಿದಂತೆ ನಾನು ಸಿದ್ಧಾಂತ ಬದಲಿಸಿಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ಧಮ್, ತಾಕತ್ತು ಬಿಜೆಪಿಯಲ್ಲಿ ಯಾರಿಗೂ ಇಲ್ಲ ಎಂದರು.
ಲೈಂಗಿಕ ಅಲ್ಪಸಂಖ್ಯಾಕರ ಕ್ಷಮೆ ಕೋರುವೆ
ನಾನು ಪ್ರಜಾಧ್ವನಿ ಸಮಾವೇಶದಲ್ಲಿ ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ನಾನು ಲೈಂಗಿಕ ಅಲ್ಪಸಂಖ್ಯಾಕರಿಗೆ ಅವಮಾನಿಸಿಲ್ಲ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಬೌರಿಂಗ್ ಆಸ್ಪತ್ರೆಯಲ್ಲಿ ಕಾಳಾ ಪತ್ತಾರ ಎಂಬವರ ಸೇವೆ ಮಾಡಿಕೊಂಡಿದ್ದ ಪೊಲೀಸ್ ಅಧಿಕಾರಿಗಳು ಇಂದು ಸಚಿವರಾಗಿ ದ್ದಾರೆ. ಅವರಿಂದ ನಾನೇನೂ ಕಲಿಯಬೇಕಿಲ್ಲ.
ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಸಚಿವರಾದವರು, ನಮ್ಮಲ್ಲಿ ಸಚಿವರಾಗಲು ಏನೆಲ್ಲ ಮಾಡಿದ್ದಾರೆ ಎಂಬುದು ಗೊತ್ತು. ಅದೆಲ್ಲ ಹೇಳಿ ನಾನು ಬಾಯಿ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ. ನಾನು ಹಣಕ್ಕಾಗಿ, ಅಧಿಕಾರಕ್ಕಾಗಿ ರಾಜಕೀಯ ಮಾಡಿದವನಲ್ಲ. ಬಿಜೆಪಿಗೆ ಹೋಗಿ ಸಚಿವರಾದವರ ರಾಜಕೀಯ ಗೋಸುಂಬೆತನ ನನಗೆ ಗೊತ್ತು.
ನಾನೂ ಪಕ್ಷದ ಹೈಕಮಾಂಡ್‌ನಲ್ಲಿ ಇದ್ದವನು. ಓರ್ವ ಸಿನೆಮಾ ನಿರ್ಮಾಪಕ ಹಾಗೂ ಓರ್ವ ನಟ ನನ್ನ ಹೇಳಿಕೆ ಕುರಿತು ಸಿನಿಮಾ ಡೈಲಾಗ್ ರೀತಿ ಹೇಳಿದ್ದಾರೆ. ಅದಕ್ಕೆ ನಾನು ಉತ್ತರ ಕೊಡಲು ಹೋಗಲ್ಲ. ಅವರೆಲ್ಲ ಏನೆಂಬುದು ನನಗೆ ಗೊತ್ತು ಎಂದರು.