Breaking News

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಬೆದರಿಕೆ: ಕೈದಿ ವಿಚಾರಣೆ

Spread the love

ಬೆಳಗಾವಿ: ಭೂಗತಪಾತಕಿ ದಾವೂದ್‌ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿಯನ್ನು, ಮಹಾರಾಷ್ಟ್ರದ ಪೊಲೀಸರು ಭಾನುವಾರ ಇಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದರು.

 

ತನಿಖೆಗೆ ಮಹಾರಾಷ್ಟ್ರದ ಎಟಿಎಸ್‌ ಮತ್ತು ನಾಗ್ಪುರದ ಪೊಲೀಸರ ತಂಡ ಧಾವಿಸಿದ್ದು, ಕೈದಿಯಿಂದ ಮಾಹಿತಿ ಕಲೆ ಹಾಕಿತು. ಆತನಿಂದ ಡೈರಿ ಜಪ್ತಿ ಮಾಡಿದೆ. ಆದರೆ, ಕರೆ ಮಾಡಲು ಬಳಸಿದ್ದ ಮೊಬೈಲ್ ಸಿಕ್ಕಿಲ್ಲ.

ಕೊಲೆ ಸೇರಿ ಮೂರು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ, ಸದ್ಯ ಇಲ್ಲಿನ ಹಿಂಡಲಗಾ ಜೈಲಿನಲ್ಲಿರುವ ಜಯೇಶ್‌ ಪೂಜಾರಿ ಶನಿವಾರ ಬೆದರಿಕೆ ಕರೆ ಮಾಡಿದ್ದರು.

‘ನನಗೆ ₹100 ಕೋಟಿ ಕೊಡಿ. ಇಲ್ಲದಿದ್ದರೆ ಗಡ್ಕರಿ ಇದ್ದಾಗಲೇ ಬಾಂಬ್ ಸ್ಫೋಟಗೊಳಿಸಿ ಸಾಯಿಸುತ್ತೇನೆ. ಪೊಲೀಸರಿಗೆ ಮಾಹಿತಿ ನೀಡಿದರೆ ಕಚೇರಿಯನ್ನೇ ಸ್ಫೋಟಿಸುತ್ತೇನೆ’ ಎಂದು ಪೂಜಾರಿ ಬೆದರಿಕೆ ಒಡ್ಡಿದ್ದ.

ಹಿಂಡಲಗಾ ಜೈಲಿನಿಂದಲೇ ಕರೆ ಬಂದಿದೆ ಎಂದು ಪತ್ತೆ ಮಾಡಿರುವ ನಾಗ್ಪುರದ ಪೊಲೀಸರ ತಂಡ, ಬೆಳಗಾವಿಗೆ ದೌಡಾಯಿಸಿದ್ದು, ಕೈದಿಯನ್ನು ವಿಚಾರಣೆಗೆ ಒಳಪಡಿಸಿದೆ.

‘ಪೂಜಾರಿ ವಿರುದ್ಧ ಕೊಲೆ ಸೇರಿದಂತೆ ಮೂರು ಪ್ರಕರಣಗಳಿದ್ದು, ಶಿಕ್ಷೆಗೆ ಗುರಿಯಾಗಿದ್ದಾನೆ. ಎಡಿಜಿಪಿ ಅಲೋಕ್‌ಕುಮಾರ್‌ ಅವರಿಗೂ ಈ ಹಿಂದೆ ಕರೆ ಮಾಡಿ ಈತ ಬೆದರಿಕೆಯೊಡ್ಡಿದ್ದ’ ಎಂದು ಮೂಲಗಳು ಖಚಿತಪಡಿಸಿವೆ.

ಪೊಲೀಸರ ಪ್ರಕಾರ, ಕೈದಿಯು ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಶನಿವಾರ ಬೆಳಿಗ್ಗೆ 11.29 ಹಾಗೂ 11.37 ಮತ್ತು ಮಧ್ಯಾಹ್ನ 12.29ಕ್ಕೆ ಕರೆ ಮಾಡಿ ಬೆದರಿಕೆ ಒಡ್ಡಿದ್ದ.

‘ಕರೆ ಸ್ವೀಕರಿಸಿದ್ದ ಕಚೇರಿ ಸಿಬ್ಬಂದಿ ವಿಳಾಸ ಕೇಳಿದಾಗ, ‘ನಾನು ಕರ್ನಾಟಕದಲ್ಲಿದ್ದೇನೆ ಎಂದಿದ್ದ’. ನಿತಿನ್‌ ಗಡ್ಕರಿ ಅವರ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ನಾಗ್ಪುರದ ಧನತೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ಕಾರಾಗೃಹದಲ್ಲೇ ಮೊಬೈಲ್ ಬಳಕೆ’
ಹಿಂಡಲಗಾ ಕಾರಾಗೃಹದಲ್ಲಿ ಮೊಬೈಲ್‌ ಬಳಕೆಗೆ ಅವಕಾಶವಿಲ್ಲ, ನಿಷೇಧಿಸಲಾಗಿದೆ. ಹಲವರು ಅಕ್ರಮವಾಗಿ ಬಳಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌ ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಕಾರಾಗೃಹದೊಳಗೆ ‘ಮೊಬೈಲ್‌ ಕಾಲ್‌ ಬ್ಲಾಕ್‌ ಸಿಸ್ಟಮ್‌’ ವ್ಯವಸ್ಥೆ ಅಳವಡಿಸಲು ಪ್ರಯತ್ನ ನಡೆಸಿದ್ದೇವೆ’ ಎಂದು ತಿಳಿಸಿದರು.

*

‘ತನಿಖೆಯು ಪ್ರಾಥಮಿಕ ಹಂತದಲ್ಲಿದೆ. ಕರೆ ಮಾಡಿದ್ದ ಜಯೇಶ್‌ನಿಂದ ಡೈರಿ ವಶಪಡಿಸಿಕೊಂಡಿದ್ದೇವೆ. ಸಂಪೂರ್ಣ ತನಿಖೆ ನಡೆದ ಬಳಿಕವೇ ವಿವರ ಲಭ್ಯ.
-ಅಮಿತೇಶ್‌ ಕುಮಾರ್, ಪೊಲೀಸ್‌ ಆಯುಕ್ತ, ನಾಗ್ಪುರ


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ