ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಶ್ರೀಸಿದ್ದೇಶ್ವರ ಸಂಸ್ಥೆಯಿಂದ ನಗರ ದೇವತೆ ಸಿದ್ದೇಶ್ವರನ ಪ್ರಸಕ್ತ ಸಾಲಿನ ಸಂಕ್ರಮಣದ ನಮ್ಮೂರ ಜಾತ್ರೆಯನ್ನು ಸರಳವಾಗಿ ಅಚರಿಸಲು ನಿರ್ಧರಿಸಿದೆ. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ, ಜಾತ್ರೆ ಆಚರಿಸಲು ಯೋಜಿಸಿದೆ.
ಮಂಗಳವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಚೇರ್ಮನ್ ಬಸಯ್ಯ ಹಿರೇಮಠ, ಸಿದ್ದೇಶ್ವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಿದ್ದೇಶ್ವರ ಜಾತ್ರಾ ಮಹೋತ್ಸದಲ್ಲಿ ಜಾನುವಾರು ಜಾತ್ರೆ ರದ್ದು ಮಾಡಲಾಗಿದೆ. ಮದ್ದು ಸುಡುವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ದೇವಸ್ಥಾನದ ಆವರಣದಲ್ಲಿ ಎರಡು ಬದಿಗೆ ಅಂಗಡಿಗಳನ್ನು ಹಾಕುವುದಕ್ಕೂ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ ಎಂದರು.
ಜಾತ್ರೆಯಲ್ಲಿ ಪ್ರಮುಖ ಅದ್ದೂರಿ ಕಾರ್ಯಕ್ರಮಗಳನ್ನೆಲ್ಲ ರದ್ದು ಮಾಡಿದ್ದು, ನಂದಿಕೋಲು ಉತ್ಸವ, ಪಲ್ಲಕ್ಕಿ ಉತ್ಸವ, ಭೋಗಿ, ಹೋಮಗಳಂಥ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಸೀಮಿತ ಗೊಳಿಸಲು ನಿರ್ಧರಿಸಿದ್ದೇವೆ ಎಂದರು.