ಹುಬ್ಬಳ್ಳಿ: ಈ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ. ಕೃಷ್ಣಾ ನದಿ ವಿಚಾರದಲ್ಲಿ ಬಿಜೆಪಿಯವರು ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಮೂರು ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.
ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ ಪ್ರತಿ ವರ್ಷ 40 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. ಆದರೆ ಒಂದು ವರ್ಷವೂ ಕೊಡಲಿಲ್ಲ. ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ. ಕೃಷ್ಣಾ ಮತ್ತು ಮಹಾದಾಯಿ ನೀರಿನ ಬಗ್ಗೆ ಅವರು ಮಾತನಾಡಲ್ಲ ಎಂದರು.
ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಕೃಷ್ಣಾ ಮತ್ತು ಮಹಾದಾಯಿ ನೀರಿನ ಹಕ್ಕಿನಿಂದ ಕರ್ನಾಟಕದ ಜನರನ್ನು ದೂರ ಇರಿಸಿದ್ದಾರೆ. ಕರ್ನಾಟಕದ ಜನರು ಅವರ ವಂಚನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಯಾತ್ರೆಯ ಮೂಲಕ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ ಎಂದರು.