Home / ಜಿಲ್ಲೆ / ಬೆಳಗಾವಿ / ನಮ್ಮದೆಂಬ ಭಾವ ಮೂಡಿಸುತ್ತಿದೆ ಕ್ಲಿನಿಕ್‌; 12 ಬಗೆಯ ಆರೋಗ್ಯ ಸೇವೆ

ನಮ್ಮದೆಂಬ ಭಾವ ಮೂಡಿಸುತ್ತಿದೆ ಕ್ಲಿನಿಕ್‌; 12 ಬಗೆಯ ಆರೋಗ್ಯ ಸೇವೆ

Spread the love

ಬೆಳಗಾವಿ: ನಗರ ಪ್ರದೇಶದ ಬಡ ವರ್ಗದ ಜನರಿಗೆ ವಿಶೇಷವಾಗಿ ಕಾರ್ಮಿಕ ವರ್ಗಕ್ಕೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿ ಎಂಬ ಉದ್ದೇಶದಿಂದ ಆರಂಭ ಮಾಡಿರುವ ನಮ್ಮ ಕ್ಲಿನಿಕ್‌ಗೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರಲ್ಲಿ ಸಹ ಇದು ನಮ್ಮ ಕ್ಲಿನಿಕ್‌ ಎಂಬ ಭಾವನೆ ಬರುತ್ತಿದೆ.

 

ಈ ನಮ್ಮ ಕ್ಲಿನಿಕ್‌ನಲ್ಲಿ 12 ಬಗೆಯ ಆರೋಗ್ಯ ಸೇವೆಗಳು ದೊರೆಯಲಿವೆ. ಗರ್ಭಿಣಿ-ಶಿಶು ಆರೈಕೆ, ಮಕ್ಕಳ ಚಿಕಿತ್ಸೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಮಧುಮೇಹ, ಲಸಿಕಾಕರಣ, ರಕ್ತದೊತ್ತಡ ತಪಾಸಣೆ, ಬಾಯಿ ಆರೋಗ್ಯ, ಕಣ್ಣು, ಕ್ಯಾನ್ಸರ್‌, ಮೂಗು ಮತ್ತು ಗಂಟಲು ತಪಾಸಣೆ, ವೃದ್ಧಾಪ್ಯ ಆರೈಕೆ ಮೊದಲಾದ ಸೇವೆಗಳು ಇಲ್ಲಿ ಲಭ್ಯವಾಗಲಿವೆ. ಇದಲ್ಲದೆ ಡೆಂಘೀ, ರಕ್ತಪರೀಕ್ಷೆ, ಮೂತ್ರ ಪರೀಕ್ಷೆ ಸೇರಿದಂತೆ 14 ಬಗೆಯ ಲ್ಯಾಬ್‌ ಪರೀಕ್ಷೆಗಳನ್ನು ಇಲ್ಲಿ ಉಚಿತವಾಗಿ ಮಾಡಲಾಗುತ್ತದೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಟ್ಟು 21 ನಮ್ಮ ಕ್ಲಿನಿಕ್‌ ಆರಂಭಿಸುವ ಗುರಿ ಹೊಂದಲಾಗಿದ್ದು ಈಗಾಗಲೇ ಮೊದಲ ಹಂತದಲ್ಲಿ ಬೆಳಗಾವಿಯಲ್ಲಿ ಎರಡು, ಬೈಲಹೊಂಗಲ, ಮೂಡಲಗಿ ಹಾಗೂ ಸವದತ್ತಿಯಲ್ಲಿ ತಲಾ ಒಂದು ಕ್ಲಿನಿಕ್‌ ಆರಂಭಿಸಲಾಗಿದೆ.

ನಮ್ಮ ಕ್ಲಿನಿಕ್‌ಗೆ ಒಟ್ಟು ನಾಲ್ಕು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅದರಲ್ಲಿ ಒಬ್ಬರು ವೈದ್ಯಾಧಿಕಾರಿಗಳು, ಒಬ್ಬ ಶುಶ್ರೂಷಕರು, ಪ್ರಯೋಗಾಲಯ ತಜ್ಞರು, ಒಬ್ಬರು ನರ್ಸ್‌ ಮತ್ತು ಒಬ್ಬ ಡಿ ದರ್ಜೆ ನೌಕರರಿದ್ದಾರೆ. ಜಿಲ್ಲಾಸ್ಪತ್ರೆ ತಜ್ಞ ವೈದ್ಯರು ಈ ಕ್ಲಿನಿಕ್‌ನಲ್ಲಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ.

ಬೆಳಗಾವಿಯಲ್ಲಿ ಎಲ್ಲೆಲ್ಲಿ?:
ಬೆಳಗಾವಿಯಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಮುಖ್ಯವಾಗಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಕಾರ್ಮಿಕರು ಜಿಲ್ಲಾಸ್ಪತ್ರೆಗೆ ಹೋಗುವುದು ಕಷ್ಟ. ನಿರ್ಲಕ್ಷ್ಯ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಕಾರ್ಮಿಕರು ಹೆಚ್ಚಿರುವ ಬೆಳಗಾವಿ ದಕ್ಷಿಣದ ಮಜಗಾವ್‌ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಶಾಹುನಗರದಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ಈಗಾಗಲೇ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್‌ನಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕ್ಲಿನಿಕ್‌ಗೆ ಬರುವ ಜನರಿಗೆ ಉಚಿತ ತಪಾಸಣೆ ಜತೆಗೆ ಉಚಿತವಾಗಿ ಔಷಧಗಳನ್ನು ಸಹ ವಿತರಣೆ ಮಾಡಲಾಗುತ್ತಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆ ಮಾತ್ರ ಮಾಡುವದರಿಂದ ಯಾವುದೇ ರೀತಿಯಲ್ಲಿ ವೈದ್ಯರ ಕೊರತೆ ಕಾಣುವುದಿಲ್ಲ. ಬೇಡಿಕೆಗಳಿಗೆ ಅನುಗುಣವಾಗಿ ಔಷಧಗಳ ಪೂರೈಕೆ ಮಾಡಲಾಗುವುದು. ಈಗ ನಮ್ಮ ಬಳಿ ಸಾಕಷ್ಟು ಔಷಧಗಳ ಸಂಗ್ರಹವಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.

ತಗ್ಗಿದ ಜಿಲ್ಲಾಸ್ಪತ್ರೆ ಒತ್ತಡ: ಮುಖ್ಯವಾಗಿ ನಮ್ಮ ಕ್ಲಿನಿಕ್‌ನಿಂದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಆಗಲಿದೆ. ಈಗ ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಜನರು ತಾಲೂಕು ಇಲ್ಲವೇ ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಬರುತ್ತಾರೆ. ಸಣ್ಣ ಸಮಸ್ಯೆಗಳಿದ್ದರೂ ಅವರನ್ನು ತಪಾಸಣೆ ಮಾಡಲೇಬೇಕು. ಇದರಿಂದ ತಜ್ಞ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಗುಣಮಟ್ಟದ ಚಿಕಿತ್ಸೆ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ದಿನಕ್ಕೆ 80ರಿಂದ 90 ರೋಗಿಗಳನ್ನು ತಪಾಸಣೆ ಮಾಡುವ ವೈದ್ಯರು ಸಹ ಒತ್ತಡಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲು ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ಇಲ್ಲಿ ತಪಾಸಣೆಗೆ ಒಳಗಾಗುವವರು ಅಗತ್ಯಬಿದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ಹೋಗುತ್ತಾರೆ. ಇದರಿಂದ ಆಸ್ಪತ್ರೆ ಮೇಲಿನ ಒತ್ತಡ ತಾನಾಗಿಯೇ ಕಡಿಮೆಯಾಗಲಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ವಿಶ್ವಾಸ.

ನಮ್ಮ ಕ್ಲಿನಿಕ್‌ ಜನ ಸಮುದಾಯಗಳು ಮತ್ತು ಆರೋಗ್ಯ ಇಲಾಖೆಯ ಯೋಜನೆಗಳ ನಡುವೆ ಸಂಪರ್ಕ ಸೇತುವೆಯಾಗಿ ಸಹ ಕೆಲಸ ಮಾಡಲಿವೆ. ಜನರು ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಣ್ಣ ಸಮಸ್ಯೆಗಳಿಗೂ ವೈದ್ಯರನ್ನು ಭೇಟಿ ಮಾಡುವದನ್ನು ತಪ್ಪಿಸಬಹುದು ಎಂಬುದು ತಜ್ಞ ವೈದ್ಯರ ಹೇಳಿಕೆ.

ನಮ್ಮ ಕ್ಲಿನಿಕ್‌ನಿಂದ ಸಾಕಷ್ಟು ಅನುಕೂಲವಾಗಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಈ ಕ್ಲಿನಿಕ್‌ನಲ್ಲಿ ಪರಿಹಾರ ದೊರೆಯಲಿದೆ. ಸದ್ಯ ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ನಗರದಲ್ಲಿ ಇನ್ನೂ 10 ಕಡೆ ಈ ಕ್ಲಿನಿಕ್‌ ಆರಂಭಿಸಲು ಅವಕಾಶಗಳಿವೆ. ಮುಂದಿನ ವರ್ಷ ಮಾರ್ಚ್‌ ವೇಳೆಗೆ ಬೇರೆ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸಲು ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು.


Spread the love

About Laxminews 24x7

Check Also

ಆಡಳಿತದಲ್ಲಿ ಪಾರದರ್ಶಕತೆ ಕೊರತೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಬೇಸರ

Spread the love ಬೆಳಗಾವಿ: ‘ಸರ್ಕಾರಿ ಯೋಜನೆಗಳ ಪ್ರಯೋಜನ ದೊರೆಯಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ