ಯಕ್ಸಂಬಾ ಪಟ್ಟಣದ ಆರಾಧ್ಯದೇವ ಬೀರೇಶ್ವರ ದೇವರಿಗೆ ಗಡಿ ಭಾಗದಲ್ಲಿ ಅಪಾರ ಭಕ್ತರಿದ್ದು, ಭಕ್ತರ ಅನೂಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೀರೇಶ್ವರ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬೀರೇಶ್ವರ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಮುಜರಾಯಿ ಇಲಾಖೆಯಿಂದ ಬೀರೇಶ್ವರ ಯಾತ್ರಿ ನಿವಾಸ ನಿರ್ಮಿಸಲು ೨೫ ಲಕ್ಷರೂ ಅನುದಾನ ಮಂಜೂರಾಗಿದೆ, ಒಂದು ವೇಳೆ ಅನುದಾನ ಕಡಿಮೆ ಬಿದ್ದಲ್ಲಿ ಮತ್ತೆ ಹೆಚ್ಚುವರಿಯಾಗಿ ಅನುದಾನ ಮಂಜೂರು ಮಾಡುವುದಾಗಿ ಹೇಳಿದರು.
ಬೀರೇಶ್ವರನ ದರ್ಶನ ಪಡೆಯಲು ಪ್ರತಿ ರವಿವಾರ ಮತ್ತು ಅಮವಾಸ್ಯೆ ದಿನದಂದು ಹಾಗೂ ಜಾತ್ರೆಯ ಸಂದರ್ಭದಲ್ಲಿ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ, ಬಂದ ಭಕ್ತರಿಗೆ ಅನೂಕೂಲ ವಾಗುವ ನಿಟ್ಟಿನಲ್ಲಿ ಯಾತ್ರಿನಿವಾಸ ನಿರ್ಮಿಸಲಿದ್ದೆವೆ.
ಹಾಗೂ ನಮ್ಮ ಸಂಸ್ಥೆಗೆ ಬೀರೇಶ್ವರರ ಹೆಸರಿಟ್ಟಿರುವುದರಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಮುಂದಿನ ದಿನಮಾನಗಳಲ್ಲಿ ಗುಜರಾತ ರಾಜ್ಯದಲ್ಲೂ ಶಾಖೆಗಳು ಪ್ರಾರಂಭಿಸಲಿದ್ದು, ಬೀರೇಶ್ವರನ ಆರ್ಶಿವಾದದಿಂದ ಸಂಸ್ಥೆಯ ಜೊತೆಗೆ ಜೊಲ್ಲೆ ಮನೆತನವು ಎಲ್ಲಾಕ್ಷೇತ್ರದಲ್ಲಿ ಬೆಳವಣಿಗೆ ಯಾಗುತ್ತಿದೆ ಎಂದರು.