ಬೆಂಗಳೂರು: ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಕಳೆದು ಹೋಗಿದ್ದ ಸಂಪುಟ ವಿಸ್ತರಣೆ ಪ್ರಸ್ತಾಪ ಮತ್ತೆ ಜೀವ ಪಡೆದುಕೊಂಡಿದ್ದು, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ ಜಾರಕಿಹೊಳಿ ಸೇರಿದಂತೆ ಐವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಈಗ ಸದ್ದಿಲ್ಲದೇ ವೇದಿಕೆ ನಿರ್ಮಾಣವಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಗುಜರಾತ್ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಡಿ.14ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಆ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಇದರ ಪೂರ್ವಭಾವಿಯಾಗಿಯೇ ಸಿಎಂ ಬೊಮ್ಮಾಯಿ ಎರಡು ದಿನಗಳ ಹಿಂದೆ ಸಂಘ-ಪರಿವಾರದ ಹಿರಿಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜಕೀಯ ಅನಿವಾರ್ಯತೆಗಾಗಿ ಸಂಪುಟ ವಿಸ್ತರಣೆ ಮಾಡಲೇಬೇಕಿರುವ ಸನ್ನಿವೇಶದ ಬಗ್ಗೆ ಮಾಹಿತಿ ನೀಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಈಶ್ವರಪ್ಪ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇದ್ದರೆ ಪಕ್ಷ ತೊರೆಯುವುದಾಗಿ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪರಿಸ್ಥಿತಿ ಹತೋಟಿಗೆ ತರಲು ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆ ಅನಿವಾರ್ಯ ಅಸ್ತ್ರವಾಗಿದೆ.
ಪಂಚಮಸಾಲಿ ಹೋರಾಟವನ್ನು ತಾತ್ಕಾಲಿಕವಾಗಿ ಶಮನ ಮಾಡುವುದಕ್ಕಾಗಿ ಆ ಸಮುದಾಯಕ್ಕೆ ಪ್ರಬಲ ಮುಖಂಡನನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಅರವಿಂದ ಬೆಲ್ಲದ ಪೈಕಿ ಒಬ್ಬರಿಗೆ ಅದೃಷ್ಟ ಒಲಿಯಬಹುದು ಎಂದು ಹೇಳಲಾಗುತ್ತಿದೆ. ಇಬ್ಬರು ಮಾಜಿ ಸಚಿವರ ಜತೆಗೆ ಜಾತಿ ಹಾಗೂ ಪ್ರಾದೇಶಿಕತೆ ಆಧರಿಸಿ ಮತ್ತೆ ನಾಲ್ವರಿಗೆ ಅವಕಾಶ ಸಿಗುತ್ತದೆ. ಅಧಿವೇಶನಕ್ಕೆ ಮುಂಚಿತವಾಗಿಯೇ ಈ ಸರ್ಕಸ್ ಮುಕ್ತಾಯಗೊಳ್ಳಲಿದೆ ಎಂದು ತಿಳಿದು ಬಂದಿದೆ.