ತಿ.ನರಸೀಪುರ: ಸಂಜೆ 6.45ರ ಸಮಯ.ನಾವು ಟಿವಿ ನೋಡುತ್ತಾ ಕುಳಿತಿದ್ದೆವು. ತಟ್ಟೆ ತೊಳೆದು ಬರುತ್ತೇನೆ ಎಂದು ಮೇಘನಾ ಹಿಂದೆ ಹೋಗಿದ್ದಳು. ಎಷ್ಟು ಹೊತ್ತಾದರೂ ಬಂದಿರಲಿಲ್ಲ. ಏಕಾಏಕಿ ಕೂಗಿಕೊಂಡ ಶಬ್ದ ಕೇಳಿ ನಾವೆಲ್ಲಾ ಓಡಿ ಹೋದೆವು. ಅಷ್ಟರಲ್ಲಿ ಚಿರತೆ ಎಳೆದುಕೊಂಡು ಹೋಗಿದ್ದನ್ನು ಕಣ್ಣಾರೆ ಕಂಡೆವು. ಕೂಗು ಹಾಕಿದ್ದರಿಂದ ಬಿಟ್ಟು ಚಿರತೆ ಓಡಿತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆಕೆ ಆಸ್ಪತ್ರೆಯಲ್ಲೇ ಮೃತಪಟ್ಟಳು. ಕಣ್ಣ ಮುಂದೆಯೇ ಪ್ರಾಣಿಯೊಂದು ದಾಳಿ ಮಾಡಿ ಮಗಳು ಸತ್ತಿದ್ದನ್ನು ನೋಡಲು ಆಗುತ್ತಿಲ್ಲ.
ಹೀಗೆ ತಾಲ್ಲೂಕಿನ ಎಸ್.ಕೆಬ್ಬೆ ಹುಂಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಯುವತಿ ಮೃತಪಟ್ಟ ಘಟನೆಯನ್ನು ಆಕೆಯ ಚಿಕ್ಕಪ್ಪ ಬಸವರಾಜು ವಿವರಿಸುತ್ತಾ ಹೋದರು. ಅವರ ಮಾತಿನಲ್ಲಿ ಕುಟುಂಬದ ಆಸರೆಯಾಗಿದ್ದ ಮಗಳು ಮೃತಪಟ್ಟ ಬೇಸರ ಒಂದು ಕಡೆ ಇದ್ದರೆ, ಅರಣ್ಯ ಇಲಾಖೆ ನಿರ್ಲಕ್ಷ್ಯದ ಆಕ್ರೋಶವೂ ಇತ್ತು.
ನಮ್ಮ ಮನೆಯ ಹಿಂದೆ ಕಬ್ಬಿನ ಗದ್ದೆಯಿದೆ. ಗ್ರಾಮದಲ್ಲಿ ಚಿರತೆಗಳ ಅಡ್ಡಾಡುತ್ತಿದ್ದುದನ್ನು ಜನರೂ ನೋಡಿದ್ದರು. ಇದನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಅವರು ಬೋನು ಇರಿಸಲಿಲ್ಲ. ಗದ್ದೆಯ ಕಡೆ ಹೋಗಬೇಡಿ ಎಂದಷ್ಟೇ ಹೇಳುತ್ತಿದ್ದರು. ಈಗ ನೋಡಿ ನಮ್ಮ ಮನೆಯಲ್ಲೇ ದುರ್ಘಟನೆ ನಡೆದಿದೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸಿಟ್ಟಿನಿಂದಲೇ ಬಸವರಾಜು ಹೇಳಿದರು.