ಹೊನ್ನಾಳಿ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಕಾರು ಹೇಗೆ ಅಪಘಾತಕ್ಕೀಡಾಗಿತ್ತು ಎಂದು ಪೊಲೀಸರು ವಿಶ್ಲೇಷಿಸಿದ್ದರೋ ಥೇಟ್ ಅದೇ ಮಾದರಿಯ ಇನ್ನೊಂದು ಅಪಘಾತ ಹೊನ್ನಾಳಿ ತಾಲೂಕಿನ ಮಾಸಡಿ ಬಳಿ ಸಂಭವಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಎರಡೂ ಪ್ರಕರಣಗಳಲ್ಲಿ ಒಂದಕ್ಕೊಂದು ಹೋಲಿಕೆ ಕಾಣುತ್ತಿವೆ. ಮೇಲಾಗಿ ಇವೆರಡೂ ನಡೆದಿದ್ದು ಹೊನ್ನಾಳಿ ತಾಲೂಕಿನಲ್ಲೇ! ಆ ಕಾರು ನೀರಿಗೆ ಬಿದ್ದಿತ್ತು. ಈ ಕಾರು ಕೂಡ ನೀರಿಗೆ ಬಿದ್ದಿದೆ. ಅಲ್ಲಿಯೂ ಏರ್ ಬ್ಯಾಗ್ ಓಪನ್ ಆಗಿತ್ತು, ಇಲ್ಲಿಯೂ ಓಪನ್ ಆಗಿದ್ದವು. ಅಲ್ಲಿಯೂ ಶವ ಹಿಂಬದಿ ಸೀಟ್‌ಗೆ ಬಂದಿತ್ತು, ಇಲ್ಲಿಯೂ ಶವ ಹಿಂದಿನ ಸೀಟ್‌ನಲ್ಲಿತ್ತು. ಅಂದಹಾಗೆ ಈ ಪ್ರಕರಣ ನಡೆದಿರುವುದು ಶನಿವಾರ ಬೆಳಗಿನ ಜಾವ. ಮೃತರನ್ನು ಬೆಳಗಾವಿ ಜಿಲ್ಲೆಯ ಬಸವನ ಕುಡಚಿ ಗ್ರಾಮದ ಎಎಸ್‌ಐ ಚೆಂಬಪ್ಪ ಅವರ ಪುತ್ರ ಪ್ರಕಾಶ್ ಚೆಂಬಪ್ಪ (28) ಎಂದು ಗುರುತಿಸಲಾಗಿದೆ.
ನಡೆದಿದ್ದಿಷ್ಟು: ಸ್ನೇಹಿತರೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಕಾಶ್ ಅಲ್ಲಿ ಅವರನ್ನು ಬಿಟ್ಟು ಬೆಳಗಾವಿಗೆ ವಾಪಸಾಗುತ್ತಿದ್ದರು. ಮಾರ್ಗಮಧ್ಯೆ ಹೊನ್ನಾಳಿ ತಾಲೂಕು ಮಾಸಡಿ – ಅರಕೆರೆ ಬಳಿ ರಸ್ತೆ ಹಂಪ್ಸ್ ದಾಟುವಾಗ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಮಹೇಶ್ವರಿ ಹಳ್ಳಕ್ಕೆ ಬಿದ್ದಿತ್ತು. ಕಾರಿನ ಇಂಡಿಕೇಟರ್ ಬೀಪ್ ಆಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಗ್ಗ ಬಳಸಿ ಕಾರು ಮೇಲೆತ್ತಲು ಪ್ರಯತ್ನಿಸಿದರು. ವಿಷಯ ತಿಳಿದ ಪೊಲೀಸರು ಕ್ರೇನ್ ಜತೆಗೆ ಆಗಮಿಸಿ ಕಾರು ಮೇಲೆತ್ತಿದರು.
ಹಿಂಬದಿ ಸೀಟ್‌ನಲ್ಲಿದ್ದ ಚಾಲಕ ಪ್ರಕಾಶ್ ಜೀವಂತ ಇರಬಹುದೆಂದು ಭಾವಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಯೋಜನ ಆಗಲಿಲ್ಲ. ನೀರಿನಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು. ಪ್ರಕಾಶ್ ತಂದೆ ಚೆಂಬಪ್ಪ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿ ಪಂಚನಾಮೆ ಹಾಗೂ ಶವ ಪರೀಕ್ಷೆ ಬಳಿಕ ಮೃತದೇಹ ಬೆಳಗಾವಿಗೆ ಕೊಂಡೊಯ್ದರು ಎಂದು ಹೊನ್ನಾಳಿ ಪಿಎಸ್‌ವೈ ಮಾಲತೇಶ್ ತಿಳಿಸಿದ್ದಾರೆ.