ಚೆನ್ನೈ: ಬಹುಭಾಷಾ ನಟ, ಉಳಗನಾಯಕನ್ ಕಮಲ್ ಹಾಸನ್ ಅನಾರೋಗ್ಯದಿಂದಾಗಿ ಬುಧವಾರ (ನವೆಂಬರ್ 23) ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್(ಎಸ್ ಆರ್ ಎಂಸಿ)ಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಜ್ವರದಿಂದ ಬಳಲುತ್ತಿರುವ ಕಮಲ್ ಹಾಸನ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಟ ಕಮಲ್ ಹಾಸನ್ ಅವರು ಇಂದು (ನ.24) ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ಹೇಳಿವೆ.
ಇತ್ತೀಚೆಗೆ ಕಮಲ್ ಹಾಸನ್ ತಮ್ಮ ಮಾರ್ಗದರ್ಶಕ, ದಂತಕಥೆ ನಿರ್ದೇಶಕ ಕೆ.ವಿಶ್ವನಾಥ್ ಅವರನ್ನು ಹೈದರಾಬಾದ್ ನಲ್ಲಿ ಭೇಟಿಯಾಗಿದ್ದರು. ಇಬ್ಬರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹೈದರಾಬಾದ್ ನಿಂದ ಮರಳಿದ್ದ ಕಮಲ್ ಹಾಸನ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ನಂತರ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕಮಲ್ ಹಾಸನ್ ಅವರು ತಮಿಳಿನ ಬಿಗ್ ಬಾಸ್ ಸೀಸನ್ 6ರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ.