ಮುಂಬೈ: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆ, ಪುಂಡಾಟದ ವೇಳೆ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುತ್ತಿರುವ ಪಿಂಚಣಿಯನ್ನು ಮಹಾರಾಷ್ಟ್ರದ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಗಡಿ ವಿವಾದದ ಹೋರಾಟದಲ್ಲಿ ಸಾವಿಗೀಡಾದವರನ್ನು “ಹುತಾತ್ಮರು’ ಎಂದು ಕರೆದಿರುವ ಸರ್ಕಾರ, ಅವರ ಕುಟುಂಬಗಳ ಪಿಂಚಣಿ ಮೊತ್ತವನ್ನು 2 ಸಾವಿರ ರೂ. ಏರಿಕೆ ಮಾಡಿದೆ. ಅದರಂತೆ, ಇನ್ನು ಮುಂದೆ ಈ ಕುಟುಂಬಗಳು ತಿಂಗಳಿಗೆ ತಲಾ 10 ಸಾವಿರ ರೂ. ಪಿಂಚಣಿ ಪಡೆಯಲಿವೆ. ವಿಶೇಷವೆಂದರೆ, ಪಿಂಚಣಿಯಲ್ಲಿನ ಈ ಏರಿಕೆಯು 2014ರ ಅ.2ರಿಂದಲೇ ಅನ್ವಯವಾಗಲಿದೆ.
1997ರಲ್ಲೇ ಮಹಾರಾಷ್ಟ್ರ ಸರ್ಕಾರವು ಗಡಿ ಬಿಕ್ಕಟ್ಟಿನ ಸಮಯದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಸಿಕ 1 ಸಾವಿರ ರೂ. ಪಿಂಚಣಿ ನೀಡಲು ನಿರ್ಧರಿಸಿತ್ತು. ಜತೆಗೆ, ಸ್ವಾತಂತ್ರ್ಯ ಹೋರಾಟಗಾರರಂತೆಯೇ ಅವರನ್ನು ಗೌರವಿಸಿ, ಸಕಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿತ್ತು. ನಂತರದಲ್ಲಿ ಯಾವಾಗೆಲ್ಲ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಏರಿಕೆ ಮಾಡಲಾಗಿತ್ತೋ, ಆವಾಗೆಲ್ಲ ಇವರ ಪಿಂಚಣಿಯನ್ನೂ ಹೆಚ್ಚಿಸುತ್ತಾ ಬರಲಾಗಿದೆ.