ಮೌಂಟ್ ಮೌಂಗನುಯಿ: ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವಿನ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 65 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲ ಟ್ವೆಂಟಿ-20 ಅಂತಾರಾಷ್ಟ್ರಿಯ ಕ್ರಿಕೆಟ್ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು.
ಬೇ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ರನ್ ಪೇರಿಸಲು ಹೆಣಗಾಡಿದ ಭಾರತ ತಂಡ, ನಂತರ ಉತ್ತಮ ಆಟ ಪ್ರದರ್ಶಿಸಿತು. ಭಾರತದ ಸೂರ್ಯಕುಮಾರ್ 49 ಎಸೆತಗಳಲ್ಲಿ ಶತಕ ಬಾರಿಸಿದರು. ಒಟ್ಟು 51 ಬಾಲ್ಗೆ 111 ರನ್ ಗಳಿಸಿ ಔಟ್ ಆಗದೆ ಉಳಿದರು.
20 ಓವರ್ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 191 ರನ್ ಭಾರತ, ಎದುರಾಳಿ ತಂಡಕ್ಕೆ 192 ರನ್ಗಳ ಗುರಿ ನೀಡಿತ್ತು. 18.5 ಓವರ್ಗೆ ಆಲ್ಔಟ್ ಆದ ನ್ಯೂಜಿಲೆಂಡ್ ತಂಡ, 126 ರನ್ ಪಡೆದು ಹೀನಾಯ ಸೋಲು ಅನುಭವಿಸಿದೆ.
ಟೀಮ್ ಇಂಡಿಯಾ ಭವಿಷ್ಯದ ಟಿ20 ತಂಡಕ್ಕಾಗಿ ಸೂಕ್ತ ಬ್ಯಾಟರ್ಗಳನ್ನು ಹುಡುಕಾಟದಲ್ಲಿದ್ದು, ಹಂಗಾಮಿ ನಾಯಕನಾಗಿ ಹಾರ್ದಿಕ್ ಪಾಂಡ್ಯಗೂ ಸರಣಿ ಮಹತ್ವ ಎನಿಸಿದೆ. ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವುದು ಕೊಂಚ ಒತ್ತಡ ಉಂಟುಮಾಡಿದೆ.
ಕಾಯಂ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಟ್ ವಿರುದ್ಧ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಆಟವಾಡಿದ ಭಾರತದ ಯುವ ಆಟಗಾರರು ಪಂದ್ಯ ಗೆದ್ದು, ಭರವಸೆ ಮೂಡಿಸಿದರು. ಟಿ20 ವಿಶ್ವಕಪ್ನಲ್ಲಿ ಆಡಿದ ಭಾರತ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಯುವ ಆಟಗಾರರ ಬಳಗ ಕಣಕ್ಕಿಳಿದಿತ್ತು.