ಅಥಣಿ ಉತ್ತಮ ರಸ್ತೆ ನಿರ್ಮಿಸಿ ಮತ್ತು ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿ ರಾಮತೀರ್ಥ ಗ್ರಾಮದ ನೂರಾರು ವಿದ್ಯಾರ್ಥಿಗಳು ಅಥಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿಯ ರಾಮತೀರ್ಥ ಕ್ರಾಸ್ ಬಳಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳೀಯ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ರಾಮತೀರ್ಥ ಕ್ರಾಸ್ ನಿಂದ ರಾಮತೀರ್ಥ ಗ್ರಾಮಕ್ಕೆ ಬಸ್ಸು ಬರುವುದಿಲ್ಲ, ಪ್ರಯಾಣಿಕರನ್ನು ಹಾಗೆಯೇ ಕ್ರಾಸಿನಲ್ಲಿ ಇಳಿಸಿ ಹೋಗುತ್ತಾರೆ, ಕೇಳಿದರೆ ರಸ್ತೆ ಸರಿಯಿಲ್ಲ ಅದಕ್ಕೆ ಬಸ್ಸು ಬರಲು ಆಗುತ್ತಿಲ್ಲ ಎಂದು ಕಾರಣ ಕೊಡುತ್ತಾರೆ. ಇದರಿಂದಾಗಿ ನಮ್ಮಂತ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ಹೋಗುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.
ಈ ಪ್ರತಿಭಟನೆಗೆ ಸಹಕಾರ ಮಾಡಿ ಮಾತನಾಡಿದ ಹಿರಿಯ ಕಾಂಗ್ರೇಸ್ ಮುಖಂಡ ಗಜಾನನ ಮಂಗಸೂಳಿ ಅವರು ಈ ಹದಗೆಟ್ಟ ರಸ್ತೆಯಿಂದ ಊರಿನ ವಿದ್ಯಾರ್ಥಿಗಳಿಗೆ, ವೃದ್ದರಿಗೆ, ಬಾಣಂತಿಯರಿಗೆ ಸಮಸ್ಯೆಯಾಗುತ್ತಿದೆ, ರಸ್ತೆ ಸರಿಪಡಿಸಬೇಕಾದ ಶಾಸಕರು ಎಲ್ಲಿದ್ದೀರಿ ? ಜನತೆ ಕೂಗು ತಮಗೆ ಕೇಳಿಸುತ್ತಿಲ್ಲವೇ ? ಶೀಘ್ರ ಈ ಸಮಸ್ಯೆ ನಿವಾರಿಸಿ ಇಲ್ಲವೇ ನಮ್ಮ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುತ್ತದೆ, ತಾಲೂಕಿನಲ್ಲಿ ಶಾಸಕರು ಇದ್ದರೂ ವಿದ್ಯಾರ್ಥಿಗಳ ಸಮಸ್ಯೆ ನಿವಾರಿಸಲು ಆಗುತ್ತಿಲ್ಲವೇ ಎಂದು ಗುಡುಗಿದರು.