ನನ್ನ ಹಿಂದೂ ಶಬ್ದದ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಸಿಎಂ ಬೊಮ್ಮಾಯಿ ಅವರು ಒಂದು ಕಮೀಟಿ ರಚನೆ ಮಾಡಲಿ. ಈ ಸಮೀತಿ ಒಂದು ತಿಂಗಳಲ್ಲಿ ವರದಿ ಕೊಟ್ಟು, ಸಾಬೀತು ಮಾಡಿದ್ರೆ ಕ್ಷಮೆ ಅಲ್ಲ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬಹಿರಂಗ ಸವಾಲು ಹಾಕಿದ್ದಾರೆ.
ಹೌದು ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಸಮಾವೇಶದಲ್ಲಿ ಹಿಂದೂ ಶಬ್ದದ ಬಗ್ಗೆ ಸತೀಶ ಜಾರಕಿಹೊಳಿ ನೀಡಿದ್ದ ಹೇಳಿಕೆ ಇಡೀ ದೇಶಾಧ್ಯಂತ ಸುದ್ದಿಯಾಗಿದೆ. ಈ ಬಗ್ಗೆ ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸತೀಶ ಜಾರಕಿಹೊಳಿ ಅವರಿಗೆ ಸತೀಶ ಜಾರಕಿಹೊಳಿ ರಾಜ್ಯದ ಕ್ಷಮೆ ಕೇಳಬೇಕು ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಅದನ್ನು ಅವರು ಸಾಬೀತು ಮಾಡಲಿ. ನಾನು ಯಾಕೆ ಕ್ಷಮೆ ಕೇಳಬೇಕು. ರಾಜೀನಾಮೆಯನ್ನೇ ಕೊಡುತ್ತೇನೆ. ಯಡಿಯೂರಪ್ಪ ಅವರು ಬೊಮ್ಮಾಯಿ ಅವರಿಗೆ ಹೇಳಿ ಒಂದು ಕಮೀಟಿ ಮಾಡಿ ನಿರ್ಣಯ ಮಾಡಲಿ. ಅದರ ಬಗ್ಗೆ ಸಾಬೀತಾದ್ರೆ ಕ್ಷಮೆ ಅಷ್ಟೇ ಅಲ್ಲ, ರಾಜಕೀಯಕ್ಕೆ ವಿದಾಯ ಹೇಳುತ್ತೇನೆ. ಅಂತಹ ಬದ್ಧತೆಯಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕ್ಷಮೆ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಬಹಿರಂಗ ಚರ್ಚೆಗೆ ಬರುವುದಾದ್ರೆ ಹೊರಗಡೆ ಬಂದು ಚರ್ಚೆ ಮಾಡಲಿ, ನಮ್ಮ ಕಡೆಯ ಪರಿಣಿತರು ಬರುತ್ತಾರೆ, ಅವರ ಕಡೆಯ ಪರಿಣಿತರು ಬರಲಿ. ನ್ಯೂಟ್ರಲ್ ಇದ್ದವರು ಇದ್ದಾರೆ. ಒಂದು ಸಾಮೂಹಿಕ ಚರ್ಚೆಯಾಗಲಿ. ನಾಲ್ಕು ಮಂದಿ ಯಾರೋ ಚರ್ಚೆ ಮಾಡಿದ್ರೆ ಅದು ಅಂತಿಮ ನಿರ್ಣಯ ಆಗೋದಿಲ್ಲ. ಸ್ವತಂತ್ರ ವೇದಿಕೆ ಮೇಲೆ ಚರ್ಚೆಯಾಗಲಿ, ಅಂದಾಗ ಅದಕ್ಕೊಂದು ಮಹತ್ವ ಬರುತ್ತದೆ ಎಂದು ಸವಾಲು ಹಾಕಿದರು. ಸತ್ಯ ಹೇಳುವುದೇ ಅಪರಾಧ, ನೊಂದವರಿಗೆ ನ್ಯಾಯ ಕೊಡಿಸುವುದೇ ಅಪರಾಧವಾಗಿದೆ. ಹಿಂದೂ ಪರ್ಷಿಯನ್ ಶಬ್ದ ಎಂದು ಹೇಳಿದ್ದು, ಆ ಬಗ್ಗೆ ಚರ್ಚೆಯಾಗಲಿ. ಸತೀಶ ಜಾರಕಿಹೊಳಿ ಸಂಶೋಧನೆ ಮಾಡಿದ ಗ್ರಂಥವಲ್ಲ. ಆದರೆ ಈ ಬಗ್ಗೆ ಚರ್ಚೆಯಾಗಲಿ ಎನ್ನುವುದು ನನ್ನ ಅಭಿಪ್ರಾಯ. ಬೇರೆ ಬೇರೆ ಕೋಟಗಳನ್ನು ಬಳಸಿಕೊಂಡು ಭಾಷಣದಲ್ಲಿ ಮಾತನಾಡಿದ್ದೇನೆ. ಅವರು ಯಾರು ಬರುತ್ತಾರೆ, ಬರಲಿ ಅವರಿಗೆ ನಾವು ಉತ್ತರ ಕೊಡುತ್ತೇವೆ ಎಂದು ಸತೀಶ ಜಾರಕಿಹೊಳಿ ಟಾಂಗ್ ಕೊಟ್ಟರು.
ಈ ಹೇಳಿಕೆಯಿಂದ ನಿಮ್ಮ ರಾಜಕೀಯದ ಮೇಲೆ ಏನಾದ್ರೂ ಪರಿಣಾಮ ಬೀರುತ್ತದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂಂದರು. ಇನ್ನು ಮೀಸಲಾತಿ ಹೋರಾಟ ವಿಚಾರಕ್ಕೆ ಪಂಚಮಸಾಲಿಗಳು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಉಪ್ಪಾರ, ಕುರುಬ ಸಮಾಜ ಸೇರಿ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ನಮ್ಮ ಹೇಳಿಕೆಯಿಂದ ವ್ಯತ್ಯಾಸ ಆಗುತ್ತದೆ ಎಂಬುದು ಕೇವಲ ಅವರ ಭ್ರಮೆ ಅಷ್ಟೇ ಎಂದರು.
ಜಾರಕಿಹೊಳಿ ಕುಟುಂಬವನ್ನು ಬೆಳಗಾವಿಯಲ್ಲಿ ಸ್ವಲ್ಪ ಸಮುದಾಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಇದು ಹೊಸದು ಏನೂ ಇಲ್ಲ, ಇದರ ಅನುಭವ ನಮಗೆ 30 ವರ್ಷಗಳಿಂದ ಆಗಿದೆ. ಲೇಬಲ್ ಅಷ್ಟೇ ಬದಲಾವಣೆ ಆಗುತ್ತದೆ. ಗಾಡಿ, ಮಂದಿ ಅವರೇ ಇರುತ್ತಾರೆ. ಬೆಳಗಾವಿ ಟೂ ಗೋಕಾಕ್, ಗೋಕಾಕ್ ಟೂ ಬೆಳಗಾವಿ ಗಾಡಿ ಹೋಗುತ್ತಿರುತ್ತದೆ. ಮತ್ತೆ ಬೈಲಹೊಂಗಲ ಕಡೆಗೂ ಓಡುತ್ತಿರುತ್ತದೆ. ಜಾರಕಿಹೊಳಿ ಗಾಡಿಯಲ್ಲಿ ಎಲ್ಲಾ ಪಕ್ಷದವರು ಕುಳಿತುಕೊಂಡಿರುತ್ತಾರೆ, ನಮ್ಮ ಗಾಡಿ ಸವದತ್ತಿಯಲ್ಲಿ ಹೋಗುವುದಿಲ್ಲ. ನಮ್ಮ ಗಾಡಿ ಯಮಕನಮರಡಿಯಲ್ಲಿಯೇ ಇರುತ್ತದೆ. ಎಂಎಲ್‍ಎ ಆಗಬೇಕು, ಮಂತ್ರಿ ಆಗಬೇಕು, ಸಿಎಂ ಆಗಬೇಕು ಅಂತಾ ಏನೂ ಇಲ್ಲ. ಇದೇ ಕೆಲಸ ಮಾಡಲು ನಮಗೆ ಖುಷಿ ಇದೆ. ಈಗ ಎಂಎಲ್‍ಎ ಆಗಿ ಮಾತಾಡಬೇಕಾಗುತ್ತದೆ. ಪೂರ್ಣಪ್ರಮಾಣದಲ್ಲಿ ನಮ್ಮನ್ನು ಫ್ರೀ ಬಿಟ್ಟರೆ ನಾವು ಫುಲ್ ಟೈಮ್ ಇದನ್ನೇ ಮಾಡುತ್ತೇವೆ. ನಾವು ಯಾರನ್ನೂ ಬೈಯುವ ಪ್ರಶ್ನೆಯೇ ಇಲ್ಲ. ಅವರ ಪಾರ್ಟಿಯವರೇ ಏನೇನೋ ಬೈಯುತ್ತಾರೆ ಎಂದರು.
ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಮಾತನಾಡಿದ್ದಾರೆ. ಅಧ್ಯಕ್ಷರು ಮಾತನಾಡಿಲ್ಲ. ಅವರದ್ದೇ ಸರ್ಕಾರ ಆಡಳಿತದಲ್ಲಿದೆ, ಒಂದು ಕಮೀಟಿ ರಚನೆ ಮಾಡಿ ಸತ್ಯಾಸತ್ಯತೆ ಸಾಬೀತು ಮಾಡಲಿ. ಯಾರೋ ಬೆಂಗಳೂರಿನಲ್ಲಿ ಕುಳಿತು ಕ್ಷಮೆ ಕೇಳಿ ಎಂದರೆ ನಡೆಯೋದಿಲ್ಲ. ಸಿಎಂ ಅವರು ತನಿಖೆ ಮಾಡಿಸಲಿ ಎಂದರು.
ಚುನಾವಣೆ ಸಂದರ್ಭದಲ್ಲಿ ಈ ವಿವಾದ ಬೇಕಿರಲಿಲ್ಲ ಎಂಬ ವಿಚಾರಕ್ಕೆ ಇದು ಯಾವುದೇ ವಿವಾದ ಅಲ್ಲ. ಇದಕ್ಕೂ ಚುನಾವಣೆಗೂ ಏನೂ ಸಂಬಂಧ ಇಲ್ಲ. ಇದರಿಂದ ಯಾವುದೇ ವ್ಯತ್ಯಾಸ ಆಗೋದಿಲ್ಲ. ಹಿಂದಿನ ಚುನಾವಣೆ ಸೋತಿದ್ದು ನಮ್ಮ ನೆಗ್ಲಿಜನ್ಸನಿಂದ. ನಮ್ಮನ್ನು ಯಾರೂ ಸೋಲಿಸಿಲ್ಲ, ನಮ್ಮನ್ನು ನಾವೇ ಸೋಲಿಸಿದ್ದೇವೆ ಎಂದರು. ತಿಂಗಳಿಗೆ ಒಂದು ಬಿಜೆಪಿಯವರಿಗೆ ಹೊಸದು ಬೇಕು. ನೂರಕ್ಕೆ ನೂರು ಇಂತಹ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಮಾಡುತ್ತಾರೆ. ವಿಕಿಪಿಡಿಯಾದಲ್ಲಿ ಯಾರು ಬರೆದಿದ್ದಾರೆ ಅವರ ವಿರುದ್ಧ ಕೇಸ್ ಹಾಕಬೇಕು. ಅದನ್ನು ಬಿಟ್ಟು ನನ್ನ ಹಿಡಿದುಕೊಂಡರೆ ಏನು ಉಪಯೋಗ..? ಎಂದು ತಿರುಗೇಟು ಕೊಟ್ಟರು