ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣದ ಸಂಬಂಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ ಸರ್ಕಾರಿ ಆಸ್ಪತ್ರೆ ಕಾರ್ಯವೈಖರಿಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಹಲವಾರಿದೆ. ಸಿಬ್ಬಂದಿಗಳ ನಡವಳಿಕೆಯನ್ನು ನೋಡಿ, ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಜನರು ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆ ಕಳೆದುಕೊಳ್ಳಲು ಪ್ರಮುಖ ಹುದ್ದೆಗಳ ಮೇಲೆ ಸರ್ಕಾರ ತೆಗೆದುಕೊಳ್ಳುತ್ತಿರುವ ನೀತಿಗಳು ಕಾರಣ. ಇದರಿಂದಾಗಿ ಎಲ್ಲರೂ ಆಸ್ಪತ್ರೆಯ ಮೇಲಿನ ಭಯ, ಭಕ್ತಿಯನ್ನು ಕಳೆದುಕೊಂಡಿದ್ದಾರೆ. ಮೊನ್ನೆ ನಡೆದ ಬಾಣಂತಿ ಸಾವಿನ ಘಟನೆ ನಿಜಕ್ಕೂ ಅಮಾನವೀಯವಾದ್ದು ಎಂದು ಹೇಳಿದರು.
ಈ ಘಟನೆಯನ್ನು ಗಮನಿಸಿದಾಗ ವೈದ್ಯರ ಹೇಳಿಕೆ ನಂಬಲು ಸಾಧ್ಯವಿಲ್ಲ. ಆಸ್ಪತ್ರೆಗೆ ಬಂದ ಹೆಣ್ಣು ಮಗಳು ಚಿಕಿತ್ಸೆ ಬೇಡವೆಂದು ಹಿಂತಿರುಗಲು ಸಾಧ್ಯವೇ? ಇದು ಎಲ್ಲರ ನಂಬಿಕೆಗೆ ವಿರುದ್ಧವಾಗಿದೆ. ಈ ರೀತಿಯ ಹೇಳಿಕೆಯನ್ನು ವೈದ್ಯರು ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ವಲಯದಿಂದ ಒತ್ತಡ ಉಂಟಾಗುತ್ತದೆ ಎಂದು ಒಂದೆರಡು ದಿನ ಕಾಟಾಚಾರಕ್ಕೆ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ. ಸ್ವಲ್ಪ ಸಮಯ ಕಳೆದು ಹಣಕಾಸಿನ ವ್ಯವಹಾರ ಮಾಡಿ ಮತ್ತದೇ ಜಾಗಕ್ಕೆ ನೇಮಕ ಮಾಡಿಕೊಳ್ಳುತ್ತಾರೆ. ಇದು ಸದ್ಯದ ಆಡಳಿತ ಸರ್ಕಾರದಲ್ಲಿ ನಡೆಯುತ್ತಿರುವ ಪ್ರತಿದಿನದ ಬೆಳವಣಿಗೆ. ಸರ್ಕಾರದ ಮೂರನೇ ಮಹಡಿಯಲ್ಲಿ ನಡಿತಿರುವ ಹಣದ ದಾಹದಿಂದಾಗಿ ಆಡಳಿತ ಕುಸಿತ ಕಂಡಿರುವುದು ಇಡೀ ರಾಜ್ಯದಲ್ಲಿ ಗಮನಕ್ಕೆ ಬರುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.