1585 ರಿಂದ 1824ರವರೆಗೆ 12 ರಾಜರ ಆಳ್ವಿಕೆಯನ್ನು ನಂತರ ಸಂಸ್ಥಾನದ ಸಂದಿಗ್ಧತೆಯಲ್ಲಿ ರಾಣಿ ಚನ್ನಮ್ಮಾಜಿಯ ಸೂಕ್ತ ನಾಯಕತ್ವ ಕಿತ್ತೂರು ಸಂಸ್ಥಾನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಸಿತು. ರಾಣಿ ಚನ್ನಮ್ಮಾ ಇವತ್ತಿನ ಬೆಳಗಾವಿ ಜಿಲ್ಲೆಯ ಕಾಕತಿಯ(ಸಾಂಗ್ಲಿ ಸಂಸ್ಥಾನ) ದೂಳಪ್ಪಗೌಢ ದೇಸಾಯಿಯ ಮಗಳಾಗಿ ಜನ್ಮ ತಾಳಿದಳು.
ನಂತರ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿಯ ಕೈ ಹಿಡಿದು ಕಿತ್ತೂರಿನ ಸಂಸ್ಥಾನಕ್ಕೆ ರಾಜ ಕಳೆ ತಂದು ಕೊಟ್ಟಳು. 1816ರಲ್ಲಿ ದೊರೆ ಮಲ್ಲಸರ್ಜ ದೇಸಾಯಿ ನಿಧನದ ನಂತರ ಸಂಸ್ಥಾನದಲ್ಲಿ ಯಾರನ್ನು ಪಟ್ಟಕ್ಕೆ ತರಬೇಕೆಂಬ ಸಂದಿಗ್ಧತೆ ಏರ್ಪಟ್ಟಿತು.
ಬೈರವಿ ಕಂಕಣ: ಮಲ್ಲಸರ್ಜ ದೇಸಾಯಿಯ ನಿಧನ ನಂತರ ಸಂಸ್ಥಾನದಲ್ಲಿ ರಾಣಿ ರುದ್ರಮ್ಮಳ ಮಗ ಶಿವಲಿಂಗರುದ್ರ ಸರ್ಜ ಮತ್ತು ರಾಣಿ ಚನ್ನಮ್ಮಾಜಿಯ ಮಗ ಶಿವಬಸವರಾಜ ರಾಜ ಪಟ್ಟಕ್ಕೆ ಅರ್ಹರಿದ್ದರು. ಆಗ ಚನ್ನಮ್ಮಾಜಿ ತನ್ನ ಮಗನಾದ ಶಿವಬಸವರಾಜನಗೆ ಬೈರವಿ ಕಂಕಣ ಕಟ್ಟಿ(ಬೈರವಿ ಕಂಕಣ ಕಟ್ಟಿಕೊಂಡವರು ರಾಜರಾಗುವಂತಿಲ್ಲ) ರಾಜ ಪದವಿಯಿಂದ ದೂರವಿಟ್ಟು ತನ್ನ ಅಕ್ಕ ರಾಣಿ ರುದ್ರಮ್ಮಳ ಮಗ ಶಿವಲಿಂಗರುದ್ರಸರ್ಜನಿಗೆ ಪಟ್ಟ ಕಟ್ಟಿದಳು. ಚನ್ನಮ್ಮಾಜಿಯ ಮಗ ಶಿವಲಿಂಗರುದ್ರಸರ್ಜನ ಅಂಗರಕ್ಷಕನಾಗಿ ಕಾರ್ಯ ನಿರ್ವಹಿಸುತ್ತ 1818ರ ಮೂರನೇ ಆಂಗ್ಲೋ-ಮರಾಠ ಯುದ್ಧದಲ್ಲಿ ಸಂಸ್ಥಾನದ ಪರವಾಗಿ ಭಾಗವಹಿಸಿ ನಿಧನ ಹೊಂದಿದನು.
ಈತನ ಸಮಾಧಿ ಕಿತ್ತೂರಿನಲ್ಲಿ ಇವತ್ತಿಗೂ ಕಾಣಬಹುದು. ಇದರಿಂದ ರಾಣಿ ಚನ್ನಮ್ಮಾಜಿಯ ನಾಯಕತ್ವದ ಜತೆಗೆ ತ್ಯಾಗದ ವ್ಯಕ್ತಿತ್ವ ಅನಾವರಣವಾಗುವುದು. ಬಹುಶಃ ಜಗತ್ತಿನ ಯಾವ ರಾಣಿಯರು ತನ್ನ ಮಗನನ್ನು ಅಧಿಕಾರದಿಂದ ದೂರವಿಟ್ಟು ಅಕ್ಕನ ಮಗನಿಗೆ ಪಟ್ಟ ಕಟ್ಟಿರುವುದು ವಿರಳ. ಹಾಗಾಗಿ ಮಲ್ಲಸರ್ಜ ದೇಸಾಯಿ ನಂತರ ರಾಣಿ ರುದ್ರಮ್ಮಾಜಿಯ ಮಗ ಶಿವಲಿಂಗ ರುದ್ರಸರ್ಜ ಅಧಿಕಾರಕ್ಕೆ ಬಂದು 1816 ರಿಂದ 1824 ರವರೆಗೆ ಆಳ್ವಿಕೆ ಮಾಡಿದ. ಈ ಸಂದರ್ಭದಲ್ಲಿ ಧಾರವಾಡದ ಜಿಲ್ಲಾಧಿಕಾರಿ ಥ್ಯಾಕರೆ ಕಿತ್ತೂರನ್ನು ಕಬಳಿಸಲು ಸದಾ ಹೊಂಚು ಹಾಕುತ್ತಿದ್ದ. ಥ್ಯಾಕರೆ 1822ರಲ್ಲಿ ಶಿವಲಿಂಗ ರುದ್ರಸರ್ಜನಿಗೆ ಪತ್ರ ಬರೆದು ಕಿತ್ತೂರು ದರೋಡೆಕೋರರ ಆಶ್ರಯ ತಾಣವಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿದ. ಇದರರ್ಥ ಕಿತ್ತೂರಿನ ಮೇಲೆ ಬಿದ್ದ ಆತನ ವಕ್ರದೃಷ್ಟಿ. ಇದೇ ಸಂದರ್ಭದಲ್ಲಿ ಕಿತ್ತೂರಿನ ದೊರೆ ಶಿವಲಿಂಗರುದ್ರಸರ್ಜ ಅನಾರೋಗ್ಯಕ್ಕೀಡಾಗಿದ್ದ.
ಅವನ ಆರೋಗ್ಯ ವಿಚಾರಿಸಲು 1824 ಮೇ 18 ರಂದು ಥ್ಯಾಕರೆ ಕಿತ್ತೂರಿಗೆ ಭೇಟಿ ನೀಡಿದ್ದ. ಶಿವಲಿಂಗರುದ್ರಸರ್ಜ ಮಕ್ಕಳಿಲ್ಲದ ಕಾರಣ ದತ್ತಕ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಸರದಾರ ಗುರುಸಿದ್ದಪ್ಪ ಆಯ್ಕೆ ಮಾಡಿ ತಂದ ಮಾಸ್ತಮರಡಿ ಬಾಳನಗೌಡ ಮಗ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಳ್ಳಲಾಗಿತ್ತು ಆದರೆ ಬ್ರಿಟಿಷ್ ಸರ್ಕಾರಕ್ಕೆ ಮಾತ್ರ ತಿಳಿಸಿರಲಿಲ್ಲ.
1824 ಸೆಪ್ಟೆಂಬರ್ 11 ರಂದು ಶಿವಲಿಂಗರುದ್ರಸರ್ಜನ ಆರೋಗ್ಯ ಕ್ಷೀಣಿಸುತ್ತ ಹೋಗುತ್ತದೆ. ತಾನು ಬದುಕಲ್ಲ ಎಂದು ಖಾತ್ರಿ ಆದ ಮೇಲೆ ಅದೇ ದಿನ ಮಧ್ಯಾಹ್ನ ಅವಸರವಾಗಿ ದತ್ತಕದ ಔಪಚಾರಿಕ ಕಾರ್ಯಕ್ರಮ ಮುಗಿಸಿದ. 1824 ಸೆಪ್ಟೆಂಬರ್ 12ರಂದು ಬೆಳಿಗ್ಗೆ 4.00 ಗಂಟೆಗೆ ನಿಧನ ಹೊಂದುತ್ತಾನೆ. ಜುಲೈ 10 ರಂದು ದತ್ತಕ ಕುರಿತು ಬರೆದ ಪತ್ರವನ್ನ ಶಿವಲಿಂಗರುದ್ರಸರ್ಜ ದೇಸಾಯಿ ತೀರಿದ ದಿನವೇ ಸಂಸ್ಥಾನದ ಸಿಬ್ಬಂದಿ ಆ ಪತ್ರವನ್ನು ಥ್ಯಾಕರೆಗೆ ಮುಟ್ಟಿಸುತ್ತಾರೆ. ಪತ್ರದಲ್ಲಿ ಜುಲೈ10 ಇದ್ದಿದ್ದನ್ನು ಕಂಡು ಸಂಶಯಗೊಂಡ. ಮತ್ತು ಈ ಪತ್ರ ಬೇರೆಯವರಿಂದ ಬರೆಯಲ್ಪಟ್ಟಿರಬೇಕು ಅಥವಾ ದೇಸಾಯಿ ವಿಚಾರ ಶಕ್ತಿ ಕಳೆದುಕೊಂಡಾಗ ಆತನ ರುಜು ಪಡೆದಿರಬೇಕು ಎಂದು ಥ್ಯಾಕರೆ ನಿರ್ಧರಿಸಿದ.
ಧಾರವಾಡದ ವೈದ್ಯಾಧಿಕಾರಿ ಹೆಚ್.ಜಿ. ಬೆಲ್‌ನನ್ನು ಕಿತ್ತೂರಿಗೆ ಕಳುಹಿಸಿ ದೇಸಾಯಿಯ ದೇಹಸ್ಥಿತಿ ವರದಿ ಮಾಡಲು ಥ್ಯಾಕರೆ ತಿಳಿಸಿದ. ಹೆಚ್.ಜಿ. ಬೆಲ್‌ನ ಪ್ರಕಾರ ಅಕ್ಟೋಬರ್ 12 ರ 3 ಗಂಟೆಗೆ ಮುಂಚೆ ನಿಧನರಾಗಿದ್ದಾರೆಂದು ವರದಿ ಮಾಡಿ ಈ ಎಲ್ಲ ಘಟನೆಗಳನ್ನು ತಿಳಿಯಲು ಸೆಪ್ಟೆಂಬರ್ 14ರಂದು ಥ್ಯಾಕರೆ ಕಿತ್ತೂರಿಗೆ ಭೇಟಿ ಮಾಡಿದ. ಅರಮನೆ ಸಿಬ್ಬಂದಿ ಹೆದರಿಸಿ ಸಂಸ್ಥಾನವನ್ನು ಕೈವಶಮಾಡಿಕೊಳ್ಳುವ ಸಿದ್ಧತೆ ಆರಂಭಿಸಿದ ಮತ್ತು ಈ ವಿಷಯ ಕುರಿತು ಡೆಕ್ಕನ್ ಕಮಿಷನರ್ ಚಾಪ್ಲಿನ್ನನಿಗೆ ಪತ್ರ ಬರೆದನು.
ಇದೇ ಸಂದರ್ಭದಲ್ಲಿ ಥ್ಯಾಕರೆ ಕಚೇರಿಯ ಮುಖ್ಯ ಗುಮಾಸ್ತ ಮುಂಬೈ ಕಮೀಷನರ್ ಚಾಪ್ಲಿನ್ನನಿಗೆ ಗುಪ್ತ ಪತ್ರ ಬರೆದು ಅದರಲ್ಲಿ ದೇಸಾಯಿ ಸೆಪ್ಟಂಬರ್ 11ರಂದು ರಾತ್ರಿ 10 ಗಂಟೆಗೆ ತೀರಿಕೊಂಡನು. ದತ್ತಕ ಕಲ್ಪನೆ ರಾಜಮನೆತನದ ನೌಕರರ ಕಟ್ಟುಕತೆ ಮತ್ತು ಸಂಸ್ಥಾನದ ಆಸ್ತಿ ಲಪಟಾಯಿಸುವುದು ಇದರ ಉದ್ದೇಶ ಎಂದು ತಪ್ಪು ಮಾಹಿತಿ ನೀಡಿದ. 1824 ಸೆಪ್ಟಂಬರ್ 14 ರಂದು ಥ್ಯಾಕರೆ ಸಂಸ್ಥಾನ ನೋಡಿಕೊಳ್ಳಲು 30 ಜನ ಬ್ರಿಟಿಷ್ ಕಾವಲುಗಾರರನ್ನು ಕೋಟೆಯ ಪೂರ್ವ-ಪಶ್ಚಿಮ ಭಾಗದಲ್ಲಿ ಕಾಯಲು ನೇಮಿಸಿದ. ಇದರಿಂದ ರೋಸಿ ಹೋದ ಚನ್ನಮ್ಮ ಸಂಸ್ಥಾನದ ವಕೀಲರಾದ ರಾಚಪ್ಪ ಮತ್ತು ಲಿಂಗೋಪಂತರನ್ನು ಮುಂಬೈ ಗವರ್ನರ್ ಎಲ್ಟಿನಸ್ಟ್‌ನನ್ನ ಭೇಟಿಯಾಗಿ ತಕರಾರು ಮಾಡಲು ಕಳುಹಿಸಿದಳು. ಆತನಿಂದ ಸಹಾನುಭೂತಿ ಸಿಗಲಿಲ್ಲ. ಥ್ಯಾಕರೆ ಅರಮನೆ ತುಂಬಾ ಗೂಢಾಚಾರರನ್ನು ನೇಮಿಸಿದ. ಕಿತ್ತೂರಿನ ರಾಣಿಯರನ್ನು ಕಾಣದಂತೆ ಸಂಸ್ಥಾನದ ಸಿಬ್ಬಂದಿಗೆ ನಿರ್ಬಂಧ ಹೇರಿದ.
ದತ್ತಕ ತೆಗೆದುಕೊಂಡ ಶಿವಲಿಂಗಪ್ಪನನ್ನು ಕೂಡಲೇ ಕಿತ್ತೂರು ಬಿಟ್ಟು ಹೋಗಬೇಕೆಂದು ಥ್ಯಾಕರೆ ಆದೇಶ ಮಾಡಿದನು. ಕಾರಣ ಶಿವಲಿಂಗಪ್ಪ ಕಿತ್ತೂರಲ್ಲಿದ್ದರೆ ಸಂಸ್ಥಾನದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದು ಎಂಬ ಆತಂಕ ಥ್ಯಾಕರೆಯನ್ನು ಕಾಡುತ್ತಿತ್ತು. ರಾಜನಿಗೆ(ಶಿವಲಿಂಗಪ್ಪ ಉರ್ಫ್ ಸವಾಯಿ ಮಲ್ಲಸರ್ಜ) ಕಿತ್ತೂರಿನಲ್ಲಿ ಇರಲು ಅವಕಾಶ ಇಲ್ಲ ಎಂದು ಘರ್ಜಿಸಿದ.
ಇದನ್ನು ಸಹಿಸಲಾರದೆ ರಾಣಿ ಚನ್ನಮ್ಮಾಜಿ ಮತ್ತು ರಾಣಿ ವೀರಮ್ಮಾ ಡೆಕ್ಕನ್ ಕಮೀಷನರ್ ಚಾಪ್ಲಿನ್ನನಿಗೆ ಪತ್ರ ಬರೆದು ಥ್ಯಾಕರೆಯ ದುಷ್ಟ ನಡೆ ತಿಳಿಸಿದರು. ರಾಣಿ ಚನ್ನಮ್ಮಾಜಿಯ ಪತ್ರಕ್ಕೆ ಚಾಪ್ಲಿನ್ನ ಉದಾಸೀನ ತೋರಿದ. ಕೊನೆಗೆ ಬ್ರಿಟಿಷ್‌ರನ್ನು ಎದುರಿಸಲು 18ನೇ ಅಕ್ಟೋಬರ್ 1824ರಂದು ಸರದಾರರ ಮತ್ತು ಅಧಿಕಾರಿಗಳ ಸಭೆ ನಡೆಸಿ ಸಂದಿಗ್ಧ ಪರಿಸ್ಥಿತಿ ವಿವರಿಸಿದಳು. ಅಕ್ಟೋಬರ್ 19 ರಂದು ಸರದಾರ ಗುರುಸಿದ್ದಪ್ಪ ಅವರೊಡನೆ ಅಂತಿಮ ಸಭೆ ನಡೆಸಿ ಯುದ್ಧಕ್ಕೆ ಅಣಿಯಾಗಲು ತಿಳಿಸಿದಳು. ಈ ಸಂದರ್ಭದಲ್ಲಿ ಕಿತ್ತೂರು ಸೈನ್ಯದಲ್ಲಿ 7 ಸಾವಿರ ಕಾಲ್ದಳ, 2 ಸಾವಿರ ಕುದುರೆ ದಳ, 1 ಸಾವಿರ ಒಂಟೆ, 50 ಆನೆ, 24 ಪೌಂಡಿನ 2 ಹಿತ್ತಾಳೆ ತೋಪುಗಳು, ಇತರೆ 14 ತೋಪುಗಳು ಸೇರಿದಂತೆ 6 ಸಾವಿರ ಶೇತ ಸನದಿಗಳು ಇದ್ದರು. 19ರಂದು ರಾಣಿ ಚನ್ನಮ್ಮಾಜಿ ಬಂಡಾಯವೇಳುವ ಮನಸ್ಥಿತಿಯಲ್ಲಿದ್ದಾರೆ ಎಂದು ಥ್ಯಾಕರೆಗೆ ಗುಪ್ತಚರರು ವರದಿ ಮಾಡಿದರು. ಬಾಗಲಕೋಟೆಯ ಕಲಾದಗಿಯಿಂದ ಬೆಳಗಾವಿಗೆ ಬರುತ್ತಿದ್ದ ಬ್ರಿಟಿಷ ರ 5ನೇ ನ್ಹೇಟಿವ್ ಇನ್ಪೆಂಟ್ರಿಯ ಸೈನ್ಯವನ್ನು ಮಾರ್ಗ ಬದಲಾಯಿಸಿ ಕಿ ತ್ತೂರಿಗೆ ಬರಲು ಥ್ಯಾಕರೆ ತಿಳಿಸಿದ.
ಅಕ್ಟೋಬರ್ 21ರಂದು ಬೆಳಿಗ್ಗೆ ಥ್ಯಾಕರೆ, ಸ್ಟೀವನ್ಸನ್ ಮತ್ತು ಇಲಿಯಟ್ ಕಿತ್ತೂರಿನ ಖಜಾನೆ ಸುರಕ್ಷತೆ ಕರಾರು ಪತ್ರಕ್ಕೆ ಸಹಿ ಹಾಕಲು ಕಳುಹಿಸಿದನು. ಆದರೆ ರಾಣಿ ಚನ್ನಮ್ಮನ ಒಪ್ಪಿಗೆ ಇಲ್ಲದೆ ಕರಾರು ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದರು. ಸಿಟ್ಟಾದ ಥ್ಯಾಕರೆ ತನ್ನ ಕುದುರೆ ಪಡೆಗೆ ದಾಳಿ ಮಾಡಲು ಸೂಚಿಸಿದ. ಬಂದೂಕುದಾರಿ ದಳದ ಮುಖಂಡ ಕ್ಯಾಪ್ಟನ್ ಬ್ಪ್ಯಾಕ್ ನನ್ನು ಕೋಟೆಯ ದ್ವಾರ ಬಾಗಿಲದೆಡೆಗೆ ತೋಪಿನ ಗಾಡಿ ಚಲಿಸಲು ಆದೇಶಿಸಿದ. ಅಕ್ಟೋಬರ್
22ರಂದು ಥ್ಯಾಕರೆ ಕಿತ್ತೂರು ಸೈನ್ಯಕ್ಕೆ ಶರಣಾಗಿ ಇಲ್ಲದೆ ಆಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದ.
ಅಕ್ಟೋಬರ್ 23ರಂದು ಕೋಟೆಗೆ ಕಾವಲಿದ್ದ ಬ್ರಿಟಿಷ್ ಸೈನಿಕರನ್ನು ಬದಲಾವಣೆ ಮಾಡಲು ಕ್ಯಾಪ್ಟನ್ ಬ್ಪ್ಯಾಕ್ ನನ್ನು ಕರೆದುಕೊಂಡು ಹೋದ. ಅದರೆ ಕಿತ್ತೂರು ಕೋಟೆ ಕಾವಲುಗಾರರು ಒಳಗಿದ್ದ ಬ್ರಿಟಿಷ್ ಪರ ಸೈನಿಕರನ್ನು ಹೊರಗೆ ಹೋಗಲು ಮತ್ತು ಹೊರಗೆ ಇದ್ದವರನ್ನು ಒಳಗೆ ಹೋಗಲು ಅವಕಾಶ ಕೊಡಲಿಲ್ಲ. ಸಿಟ್ಟಿನಿಂದ ಮತ್ತೆರಡು ತೋಪುಗಳನ್ನು ಕೋಟೆಯ ಮಹಾದ್ವಾರಕ್ಕೆ ತಂದು ನಿಲ್ಲಿಸಲು ಆದೇಶಿಸಿದ.
ಕೊನೆಗೆ ಥ್ಯಾಕರೆ ಕಿತ್ತೂರು ಸೈನ್ಯಕ್ಕೆ ಕೋಟೆಯ ಬಾಗಿಲು ತೆರೆಯಲು ಹೇಳಿ ಕಳುಹಿಸಿದ. ಕೋಟೆಯ ದ್ವಾರದ ಎದುರು ನಿಲ್ಲಿಸಿದ ಬ್ರಿಟಿಷರು ಸೈನ್ಯವನ್ನು ಸುರಕ್ಷಿತವಾಗಿ ದೂರಕ್ಕೆ ಸರಿಸದ ವಿನಃ ಬಾಗಿಲು ತೆರೆಯುವುದಿಲ್ಲ ಎಂದು ಕಿತ್ತೂರು ಸೈನಿಕರು ಹೇಳಿದರು. ಥ್ಯಾಕರೆ 1 ಘಡಿ(24) ನಿಮಿಷದಲ್ಲಿ ಕೋಟೆಯ ಬಾಗಿಲು ತೆರೆಯದಿದ್ದಲ್ಲಿ ಕೋಟೆಯ ಬಾಗಿಲನ್ನು ತೋಪಿನಿಂದ ಸ್ಫೋಟಿಸಿ ಒಡೆದು ತೆಗೆಯಲಾಗುವುದು ಎಂದು ಹೇಳಿ ಕಳುಹಿಸಿದ. 1 ಘಡಿಯ ನಂತರ ಕೋಟೆಯ ಬಾಗಿಲುಗಳು ಒಳಗಿನಿಂದ ಹೊರಗೆ ತೆಗೆದವು. ಕಿತ್ತೂರು ಸೈನಿಕರು ಬ್ರಿಟಿಷ್ ಸೈನಿಕರ ಮೇಲೆ ಸುನಾಮಿಯಂತೆ ಅಪ್ಪಳಿಸಿದರು.
ತೋಪಿಗೆ ಬೆಂಕಿ ಇಡುತ್ತಿದ್ದ ಕ್ಯಾಪ್ಟನ್ ಬ್ಪ್ಯಾಕ್ ಮತ್ತು ಡಯಟನ್ ನಿಂದ ತೋಪುಗಳನ್ನು ಕಿತ್ತೂರ ಸೈನಿಕರು ವಶಪಡಿಸಿಕೊಂಡರು. ಬ್ಪ್ಯಾಕ್ ಮತ್ತು ಡಯಟನ್ನನ ತಲೆ ಕತ್ತರಿಸಿದರು. ಅಮಟೂರು ಬಾಳಪ್ಪ ಥ್ಯಾಕರೆಯನ್ನು ಕೊಂದನು. ರಾಮಹಸಬಿ ಎಂಬ ನಿಗ್ರೋ ಸೈನಿಕ ಸತ್ತ ಥ್ಯಾಕರೆಯ ರುಂಡ ಕತ್ತರಿಸಿ ಭರ್ಚಿಗೆ ಸಿಕ್ಕಿಸಿಕೊಂಡು ವಿಜಯ ಕೇಕೆ ಹಾಕುತ್ತ ಕುಣಿದು ಕುಪ್ಪಳಿಸಿದ. ಬ್ಪ್ಯಾಕ್ ಡಯಟಿನ್ ಮತ್ತು ಲೆಫ್ಟಿನೆಂಟ್ ಸಿವೆಲ್ ಸೇರಿದಂತೆ 80 ಜನ ಬ್ರಿಟಿಷ್ ಸೈನಿಕರು ಸತ್ತರು ಹಾಗೂ 40 ಜನ ಬ್ರಿಟಿಷ್ ಸೈನಿಕರು ಸೆರೆ ಆದರು.
ಕಿತ್ತೂರಿನ ಖಾಸಗಿ ಮನೆಗಳಲ್ಲಿ ಅಡಗಿ ಕುಳಿತ ಥ್ಯಾಕರೆನ ರಾಜಕೀಯ ಸಲಹೆಗಾರ ಸ್ಟೀವನ್ಸನ್ ಮತ್ತು ಇಲಿಯಟ್ ಶಿರಸ್ತೇದಾರ ಶ್ರೀನಿವಾಸರಾವ್‌ನನ್ನು ಕೊಲ್ಲಲು ಕಿತ್ತೂರು ಸೈನಿಕರು ನಿರ್ಧರಿಸಿದರು. ಆದರೆ ರಾಣಿ ಚನ್ನಮ್ಮ ಇದನ್ನು ತಡೆದಳು. ಇಕ್ಕಟ್ಟಿನಲ್ಲಿ ಸಿಕ್ಕ ವೈರಿಗಳನ್ನು ಔದಾರ್ಯದಿಂದ ಕಾಣುವ ಗುಣಗಳು ರಾಣಿ ಚನ್ನಮ್ಮಾಜಿಯಲ್ಲಿ ಇದ್ದವು. ಆ ಕಾರಣದಿಂದ ರಾಣಿ ಚನ್ನಮ್ಮ ಭಾರತ ಇತಿಹಾಸದಲ್ಲಿ ಮಹಾರಾಣಿ ಆಗಿದ್ದಾಳೆ. ಅಷ್ಟೆ ಅಲ್ಲದೆ ವೈರಿಗಳ ಮಕ್ಕಳು ವೈರಿ ಅಲ್ಲ ತಿಳಿದು ಸತ್ತ ಥ್ಯಾಕರೆಯ ಮಕ್ಕಳನ್ನು ಜತನದಿಂದ ನೋಡಿಕೊಳ್ಳಲು ಸಂಸ್ಥಾನದ ಹಣಕಾಸು ಅಧಿಕಾರಿ ಬಸಲಿಂಗಪ್ಪ ಜಕಾತಿ ಅವರಿಗೆ ವಹಿಸಿಕೊಟ್ಟು ರಾಷ್ಟ್ರಮಾತೆ ಆಗಿದ್ದಾಳೆ. ಕಿತ್ತೂರು ವಿಜಯೋತ್ಸವ ಸಂದರ್ಭದಲ್ಲಿ ರಾಣಿ ಚನ್ನಮ್ಮಾಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಿರತರಾಗೋಣ.
(ಆಕರ: ವಿವಿಧ ಗ್ರಂಥಗಳು)
*ಬಸವರಾಜ ಚಿನಗುಡಿ