ಬೆಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ನಾಡಿನ ವಿವಿಧ ವಲಯದಿಂದ 28 ಸಾವಿರ ಅರ್ಜಿಗಳ ಸಲ್ಲಿಕೆಯಾಗಿವೆ.
ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಕ ಮಾಡಿದ್ದ ಉಪಸಮಿತಿ, ಸಲಹಾ ಸಮಿತಿ ಅರ್ಜಿ ಪ್ರಕ್ರಿಯೆಯ ಪರಿಶೀಲನೆ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ ನಡೆಯಲಿದ್ದು ಇಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಈ ವರ್ಷ 67ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದ 67 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಗಾಗಿ ಸಾವಿರಾರು ಮಂದಿ ಆನ್‌ಲೈನ್ ಹಾಗೂ ಸೇವಾ ಸಿಂಧು ಪೋರ್ಟ್‌ನಲ್ಲಿ ಅರ್ಜಿಸಲ್ಲಿಕೆ ಮಾಡಿದ್ದರು.ಇನ್ನೂ ಕೆಲವರು ಭೌತಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್ ನೇತೃತ್ವದಲ್ಲಿ ಸಲಹಾ ಸಮಿತಿ ಕೂಡ ಸಭೆ ನಡೆಸಿ ಸಾಧಕರನ್ನು ಪ್ರಶಸ್ತಿಗೆ ಅಂತಿಮಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿತ್ತು. ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 1:3 (ಒಂದು ಪ್ರಶಸ್ತಿಗೆ ಮೂವರು ಅರ್ಜಿ)ಗಳನ್ನು ಅಂತಿಮಗೊಳಿಸಿತ್ತು ಎಂದು ತಿಳಿಸಿದ್ದಾರೆ.
ಎಲ್ಲ ಜಿಲ್ಲೆಗೂ ಒಂದು ಪ್ರಶಸ್ತಿ
ಈಗಾಗಲೇ ನಾಗಮೋಹನ್ ದಾಸ್ ಸಮಿತಿ ನೀಡಿರುವ ಶಿಫಾರಸಿನ ಮಾನದಂಡಗಳಂತೆ ಪ್ರತಿ ಜಿಲ್ಲೆಗೂ ಒಂದು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜತೆಗೆ ರಂಗಭೂಮಿ, ಸಂಗೀತ-ನೃತ್ಯ, ಜಾನಪದ, ಚಲನಚಿತ್ರ, ಕಿರುತೆರೆ, ಚಿತ್ರಕಲೆ-ಶಿಲ್ಪಕಲೆ, ಯಕ್ಷಗಾನ-ಬಯಲಾಟದ ಸಾಧಕರನ್ನು ಗುರುತಿಸಲಾಗುತ್ತಿದೆ. ಹಾಗೆಯೇ ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಸಹಕಾರ, ವೈದ್ಯಕೀಯ, ಶಿಕ್ಷಣ ಕ್ಷೇತ್ರದ ಸಾಧಕರನ್ನು ಕೂಡ ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ.
ಕೆಲವು ಅಚ್ಚರಿ ಆಯ್ಕೆಗಳು ಇರಬಹುದು:
ಸರ್ಕಾರ ಈಗಾಗಲೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಮಾಡದ ಎಲೆಮರೆ ಕಾಯಿಯಂತಿರುವವರನ್ನು ಕೂಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವುದಾಗಿ ಹೇಳಿದೆ. ಆ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳು ಕೂಡ ಇರಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7