ಬಾಗಲಕೋಟೆ: ಪಿಡಿಒಗಳು ಲಂಚಸ್ವೀಕರಿಸುತ್ತಿದ್ದಾಗ ತಾಲೂಕಿನ ರಾಂಪುರ ಹಾಗೂ ಬೇವಿನಮಟ್ಟಿ ಗ್ರಾಮ ಪಂಚಾಯ್ತಿಗಳಲ್ಲಿ ಲೋಕಾಯುಕ್ತರ ಬಲೆ ಬಿದ್ದಿದ್ದಾರೆ. ಬೇವಿನಮಟ್ಟಿ ಪಿಡಿಒ ಚಂದ್ರಕಾಂತ್ ತಿಮ್ಮಾಪುರ ಮತ್ತು ರಾಂಪುರ ಪಿಡಿಒ ಮುದಕಪ್ಪ ತೇಜಿ ಎಂಬುವವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಪಿಡಿಓಗಳು ಎನ್.ಎ ಪ್ಲಾಟ್ ಎಂಟ್ರಿ ಮಾಡಿಕೊಡಲು ಎರಡೂವರೆ ಲಕ್ಷ ಲಂಚ ಕೇಳಿದ್ದರು. ಈ ಇಬ್ಬರು ಪಿಡಿಓಗಳು ಸ್ನೇಹಿತರಾಗಿದ್ದು, ಹೊನ್ನಾಕಟ್ಟಿ ಗ್ರಾಮದ ವಾಸು ಜಾಧವ್ ಎಂಬುವರಿಗೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಇವರಿಬ್ಬರಿಗೆ ದಾಳಿ ಮಾಡಿದ್ದಾರೆ. ಲಂಚದ ಮೊತ್ತ ಒಂದು ಲಕ್ಷ ರೂ. ಪಡೆಯುವಾಗ ಲೋಕಾಯುಕ್ತರು ಹಿಡಿದಿದ್ದಾರೆ.
ವಿಜಯಪುರ ಲೋಕಾಯುಕ್ತ ಎಸ್.ಪಿ ಅನಿತಾ ಮಾರ್ಗದರ್ಶನದಲ್ಲಿ, ಬಾಗಲಕೋಟೆ ಲೋಕಾಯುಕ್ತ ಡಿ.ಎಸ್.ಪಿ ಪುಷ್ಪಲತಾ ಹಾಗೂ ಸಿ.ಪಿ.ಐ ಮಲ್ಲಪ್ಪ ಬಿದರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಇಬ್ಬರೂ ಪಿಡಿಒಗಳನ್ನ ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.