ಬೆಂಗಳೂರು: ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಬಾಣಾವರ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ದಾರುಣ ಅಂತ್ಯ ಕಂಡಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ.
ಶನಿವಾರ ತಡರಾತ್ರಿ ಬಾಣವರ ಹಾಲಿನ ಟ್ಯಾಂಕರ್, ಟಿಟಿ ವಾಹನ, ಕೆಎಸ್ ಆರ್ ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳೂ ಸೇರಿ 9 ಜನರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಧರ್ಮಸ್ಥಳ ಸೇರಿ ಕೆಲ ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆದು ತಮ್ಮ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಗ್ರಾಮಕ್ಕೆ ಕೆಲವೇ ಕಿಮೀ ದೂರದಲ್ಲಿ ಈ ಅಪಘಾತವಾಗಿದೆ.
ಟಿಟಿ ವಾಹನದಲ್ಲಿದ್ದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತ ದುರ್ದೈವಿಗಳು.
ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ, ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
Laxmi News 24×7