ಬೆಂಗಳೂರು,ಸೆ.28- 17ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳು ಆರು ದಿನ, 40 ಗಂಟೆಗಳ ಕಾಲ ಅತ್ಯಂತ ಯಶಸ್ವಿಯಾಗಿ ಹಾಗೂ ಅತ್ಯುತ್ತಮವಾಗಿ ನಡೆದಿವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಿಂದ 26ರ ರಾತ್ರಿ 11 ಗಂಟೆವರೆಗೂ ಅವೇಶನ ನಡೆಸಿದ್ದು ಶೇ.90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಲಾಗಿದೆ. ಕೊರೊನಾ ಆತಂಕದ ನಡುವೆ ಕೈಗೊಂಡಿದ್ದ ಅಗತ್ಯ ಮುನ್ನೆಚ್ಚರಿಕೆ ಕ್ರಮವು ಯಶಸ್ವಿಯಾಗಿ ಅವೇಶನ ನಡೆಸಲಾಗಿದೆ ಎಂದರು.
ವಿವಿಧ ಸ್ಥಾಯಿಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು, ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸಿ ತಿದ್ದುಪಡಿ ತರಲು ಶಿಫಾರಸ್ಸು ಮಾಡುವುದಕ್ಕಾಗಿ ನಿಯಮಾವಳಿ ಸಮಿತಿಯನ್ನು ರಚಿಸಲು ಸದನದಲ್ಲಿ ಸಭಾಧ್ಯಕ್ಷರಿಗೆ ಅಕಾರ ನೀಡಲಾಗಿದೆ ಎಂದು ಹೇಳಿದರು.
ವಿಧೇಯಕಗಳ ಬಗ್ಗೆ 14 ಗಂಟೆ 22 ನಿಮಿಷ ಚರ್ಚೆಯಾಗಿದ್ದು, ಸದಸ್ಯರು ಉತ್ಸಾಹದಿಂದ ಚರ್ಚೆಯಲ್ಲಿ ಭಾಗವಹಿಸಿ ಅತ್ಯುತ್ತಮ ಚರ್ಚೆಯಾಗಿರುವುದು ಈ ಬಾರಿ ಅವೇಶನದ ದಾಖಲೆಯಾಗಿದೆ ಎಂದರು. 37 ವಿಧೇಯಕಗಳ ಪೈಕಿ 36 ವಿಧೇಯಕಗಳನ್ನು ಚರ್ಚಿಸಿ ಅಂಗೀಕರಿಸಲಾಗಿದೆ. ಒಂದು ವಿಧೇಯಕ ಮಾತ್ರ ಚರ್ಚಿಸಿ ತಡೆ ಹಿಡಿಯಲಾಗಿದೆ.
ಸದನದ ಆರಂಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರು, ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಮೃತಪಟ್ಟ ಯೋಧರು, ಅತಿವೃಷ್ಟಿಯಿಂದ ಮೃತಪಟ್ಟವರಿಗೆ ಗೌರವ ಪೂರ್ವಕ ಸಂತಾಪಸೂಚನಾ ನಿರ್ಣಯ ಕೈಗೊಳ್ಳಲಾಯಿತು.
ವಿಧಾನಮಂಡಳ, ವಿಧಾನಸಭೆ ಸಮಿತಿಗಳ ಆರು ವರದಿಗಳು, ಜಂಟಿ ಪರಿಶೀಲನಾ ಸಭೆಯ ವಿಶೇಷ ವರದಿ, 57 ಅಸೂಚನೆಗಳು, 19 ಅದ್ಯಾದೇಶಗಳು, 62 ವಾರ್ಷಿಕ ವರದಿಗಳು, 19 ಲೆಕ್ಕ ಪರಿಶೋಧನಾ ವರದಿ, ಒಂದು ಅನುಷ್ಠಾನ ಮತ್ತು ಅನುಪಾಲನ ವರದಿ ಹಾಗೂ ಮೂರು ವಿಶೇಷ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಅಲ್ಲದೆ ನಾಲ್ಕು ಅರ್ಜಿಗಳನ್ನು ಒಪ್ಪಿಸಲಾಗಿದೆ.
2020-21ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ. ವಿಧಾನಪರಿಷತ್‍ನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರ ರೂಪದಲ್ಲಿರುವ ಎರಡು ವಿಧೇಯಕಗಳು, ಜನ ವಿನಿಯೋಗ ವಿಧೇಯಕ ಸೇರಿದಂತೆ 36 ವಿಧೇಯಕಗಳಿಗೆ ಸದನ ಒಪ್ಪಿಗೆ ನೀಡಿದೆ.
ನಿಯಮ 60ರಡಿ ನೀಡಿದ ಮೂರು ವಿಧೇಯಕಗಳನ್ನು ಪರಿವರ್ತಿಸಿರುವುದು ಸೇರಿದಂತೆ ಒಟ್ಟು 20 ಸೂಚನೆಗಳನ್ನು ನಿಯಮ 69ರಡಿ ಸ್ವೀಕರಿಸಿ ಒಂದು ಸೂಚನೆ ಮೇಲೆ ಚರ್ಚೆಯಾಗಿದೆ ಎಂದು ವಿವರಣೆ ನೀಡಿದರು. ಒಟ್ಟು 3071 ಪ್ರಶ್ನೆಗಳನ್ನು ಸ್ವೀಕರಿಸಿ 1109 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳ ಉತ್ತರವನ್ನು ಇಮೇಲ್ ಮೂಲಕ ಒದಗಿಸಲಾಗಿದೆ.
ನಿಯಮ 35ರಡಿ 60 ಸೂಚನೆಗಳನ್ನು ಅಂಗೀಕರಿಸಿ, 35 ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. ಗಮನಸೆಳೆಯುವ 129 ಸೂಚನೆಗಳ ಪೈಕಿ 09 ಸೂಚನೆಗಳನ್ನು ಚರ್ಚಿಸಲಾಗಿದೆ. 72 ಸೂಚನೆಗಳಿಗೆ ಉತ್ತರ ಸ್ವೀಕಾರ ಆಗಿದೆ.
ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲದ ಮೇಲೆ ವಿರೋಧ ಪಕ್ಷದ ನಾಯಕರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪ್ರಸ್ತಾವ ಧ್ವನಿ ಮತದಿಂದ ತಿರಸ್ಕರಿಸಲ್ಪಟ್ಟಿದೆ. ಕೊರೊನಾ ಪಾಸಿಟಿವ್ ಮತ್ತಿತರ ಕಾರಣಗಳಿಂದಾಗಿ ಐದಾರು ಸಚಿವರು ಸೇರಿದಂತೆ 28 ಸದಸ್ಯರು ಸದನಕ್ಕೆ ಬರಲು ಸಾಧ್ಯವಾಗಿಲ್ಲ.
ಬಿಜೆಪಿ 12, ಕಾಂಗ್ರೆಸ್ 10, ಜೆಡಿಎಸ್‍ನ 6 ಸದಸ್ಯರು ಸೇರಿದ್ದಾರೆ ಎಂದು ತಿಳಿಸಿದರು. ಸದನ ಅತ್ಯುತ್ತಮವಾಗಿ ನಡೆಯಲು ಸಹಕರಿಸಿದ ಸಭಾನಾಯಕರು, ವಿರೋಧ ಪಕ್ಷದ ನಾಯಕರು, ಸಚಿವರು ಉಪಸಭಾಧ್ಯಕ್ಷರು, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು, ಎಲ್ಲಾ ಸದಸ್ಯರು, ಅಕಾರಿ, ಸಿಬ್ಬಂದಿಯವರು ಮಾಧ್ಯಮ ಪ್ರತಿನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕೊರೊನಾ ವೈರಸ್ ಹರಡದಂತೆ ತೆಗೆದುಕೊಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಸದನಕ್ಕೆ ಹಾಜರಾಗಿ ಸದನದ ಕಾರ್ಯಕಲಾಪಗಳು ಸುಗಮವಾಗಿ ಜರುಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಕೊರೊನಾ ಹಾವಳಿಗೆ ಕಡಿವಾಣ ಹಾಕಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.