ಬೆಳಗಾವಿ: 2023ರ ವಿಧಾನಸಭೆ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಧಾರವಾಡ ಪ್ರವೇಶಕ್ಕೆ ಅನುಮತಿ ಸಿಗದಿದ್ದರೂ ಹೊರಗಿದ್ದೇ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಿಸುವುದಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಷ್ಟರಲ್ಲೇ, ನನಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸವಿದೆ. ಒಂದು ವೇಳೆ ಪ್ರವೇಶಕ್ಕೆ ಅನುಮತಿ ಇಲ್ಲದಿದ್ದರೂ ಹೊರಗಿದ್ದೆ ಚುನಾವಣೆ ಕಣಕ್ಕಿಳಿಯುವೆ ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾಯಿಸುವುದಿಲ್ಲ ಎಂದರು.
ಪಂಚಮಸಾಲಿ ಮೀಸಲು ಕ್ರೆಡಿಟ್ ಫೈಟ್: ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದರು. ಇನ್ನು ಪಂಚಮಸಾಲಿ ಮೀಸಲಾತಿ ಫೈಟ್‍ನಲ್ಲಿ ಕ್ರೆಡಿಟ್ ವಾರ ನಡೆಯುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನಂತೂ ಎಂದಿಗೂ ಕ್ರೆಡಿಟ್ ಸಿಗುತ್ತೆ ಎಂದು ಹೋಗುವ ಮನುಷ್ಯ ಅಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಇವತ್ತು ನಾನು ಎಲ್ಲ ಸಮಾಜಗಳ ಜೊತೆಗೂ ಇದ್ದೇನೆ. ಒಂದೇ ಸಮಾಜದ ಪರವಾಗಿ ನಾನು ಕೆಲಸ ಮಾಡಿಲ್ಲ. ಎಲ್ಲಾ ಸಮಾಜ, ವರ್ಗಗಳ ಜೊತೆಗೆ ಸೇರ ರಾಜಕೀಯಕ್ಕೆ ಬಂದಿದ್ದೇನೆ.
ಎಲ್ಲಾ ಸಮಾಜಗಳ ಜನರು ಕೂಡ ಅಷ್ಟೇ ನನ್ನನ್ನು ಪ್ರೀತಿಸುತ್ತಾರೆ. ಒಂದೇ ಸಮಾಜ ಫಿಕ್ಸ್ ಇಟ್ಟುಕೊಂಡು ನಾವು ಯಾವತ್ತೂ ಹೋರಾಟ ಮಾಡಲು ಆಗೋದಿಲ್ಲ. ಎಲ್ಲ ಸಮಾಜದವರಿಗೂ ಅವರವರ ಯೋಗ್ಯತೆ ಅನುಸಾರ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲಿ ಎಂಬುದಕ್ಕೆ ನಮ್ಮ ಹೋರಾಟ ಎಂದರು.
ಒಂದೇ ಸಮಾಜ ಅಲ್ಲ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವುದು, ಕುರುಬ ಸಮಾಜ ಎಸ್‍ಟಿಗೆ ಸೇರಿಸುವುದು ಸೇರಿ ಸಾಕಷ್ಟು ಸಮಾಜಗಳ ಹೋರಾಟ ನಡೆಯುತ್ತಿದೆ. ಎಲ್ಲ ಸಮಾಜಗಳ ಬಗ್ಗೆ ತುಲನೆ ಮಾಡಿ ನ್ಯಾಯ ಕೊಡಿಸಬೇಕು.