ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಹಿರಿಯ ಜೀವಿ ರುದ್ರಮ್ಮ ಬಸವಣೆಪ್ಪ ಹೊಂಗಲ(ಕುದರಿ) ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಒಕ್ಕುಂದ ಗ್ರಾಮದ 93 ವರ್ಷದ ರುದ್ರಮ್ಮ ಹೊಂಗಲ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಅವರ ಕುಟುಂಬಸ್ಥರ ನಿರ್ಧಾರದಂತೆ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೇತ್ರಗಳನ್ನು ದಾನ ಮಾಡಿ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಈ ಮೂಲಕ ಇಬ್ಬರು ಅಂಧರ ಬಾಳಿಗೆ ಬೆಳಕು ಸಿಕ್ಕಂತಾಯ್ತು. ನಂತರ ಬುಧವಾರ ಬೆಳಿಗ್ಗೆ ಒಕ್ಕುಂದ ಗ್ರಾಮದ ಸ್ಮಶಾನದಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಅಜ್ಜಿಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಮೃತರು ಇಬ್ಬರು ಸುಪುತ್ರರು, ಮೂವರು ಸುಪುತ್ರಿಯರು, ಸೊಸೆಯಂದಿರು, ಅಳಿಯಾ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.