ಧಾರವಾಡ : ಹುಬ್ಬಳ್ಳಿಯಲ್ಲಿ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದರು. ರಾಜ್ಯದಲ್ಲಿ ಕೆಲವು ಕಡೆ ಮಿನಿ ಪಾಕಿಸ್ತಾನ ಮಾಡುವುದನ್ನು ತಡೆಯಲು ಆಗಲಿಲ್ಲ. ಆದರೆ ಹುಬ್ಬಳ್ಳಿಯಲ್ಲಿನ ಮೈದಾನವನ್ನು ರಾಣಿ ಚನ್ನಮ್ಮ ಮೈದಾನ ಎಂದು ಪರಿವರ್ತನೆ ಮಾಡಬಹುದಾದರೆ, ಅದಕ್ಕೆ ಗಂಡು ಮೆಟ್ಟಿದ ನಾಡಿನ ಗುಂಡಿಗೆ ಬೇಕಾಗುತ್ತದೆ ಎಂದು ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹೇಳಿದ್ದಾರೆ.
ದಸರಾ ಹಬ್ಬದ ಹಿನ್ನೆಲೆ ನಂದಗೋಕುಲ ಸೇವಾ ಸಂಸ್ಥೆಯಿಂದ ಆಯೋಜಸಿದ ರಾವಣ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮ ನಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪನೆ ಆದ ಮೇಲೆ ಹಿಂದುಗಳ ಸಂರಕ್ಷಣೆ ಆದಂತೆಯೇ. ಈ ಮಣ್ಣಿಗೆ ಆ ತಾಕತ್ತು ಇದೆ. ಇಡಿ ಜಗತ್ತು ರಕ್ತಪಾತದಲ್ಲಿ ಮುಳುಗಿದ್ದ ಸಮಯದಲ್ಲಿ ಶಾಂತಿ ಸಾರಿದ ನಾಡಿದು ಎಂದು ಹೇಳಿದರು.
ಹಿಂದೂಗಳ ಕಲ್ಲು ಇತರ ಪ್ರಾರ್ಥನಾ ಮಂದಿರದ ಮೇಲೆ ಬೀಳಲ್ಲ : ಈ ಭೂಮಿಯಲ್ಲಿ ಎರಡು ರೀತಿಯ ಜನ ಇದ್ದಾರೆ. ಒಂದು ಜನಾಂಗದ ಜನ ಒಂದು ಧರ್ಮದ ದೇವಸ್ಥಾನದ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಾರೆ. ಹಿಂದೂಗಳು ಸುಖಾಸುಮ್ಮನೆ ಯಾರ ಮೇಲೂ ಕಲ್ಲು ಹೊಡೆಯಲ್ಲ. ರಾಮನವಮಿ ವೇಳೆ ದೇಶದ 11 ಕಡೆ ಕಲ್ಲು ಬೀಳುತ್ತೆ. ಹುಬ್ಬಳ್ಳಿ ಹನುಮನ ಗುಡಿಯ ಮೇಲೂ ಕಲ್ಲು ಬೀಳುತ್ತೆ. ನಾವು ನಿಮ್ಮಂತೆ ದೇವಸ್ಥಾನದ ಮೇಲೆ ಕಲ್ಲು ಎಸೆಯುವವರಲ್ಲ. ಹಿಂದೂಗಳ ಕಲ್ಲು ಇನ್ನೊಂದು ಪ್ರಾರ್ಥನಾ ಮಂದಿರದ ಮೇಲೆ ಬೀಳಲ್ಲ ಎಂದು ಹೇಳಿದರು.