ಗಂಗಾವತಿ: ಬುಧವಾರವಷ್ಟೇ ಬಸವನದುರ್ಗಾ ಕಡೆಬಾಗಿಲು ಬಳಿ ಕಂಡು ಬಂದಿದ್ದ ಜೋಡಿ ಚಿರತೆಗಳು ಗುರುವಾರ ಮತ್ತೆ ತಾಲೂಕಿನ ಬಸವನದುರ್ಗಾ ಗೂಗಿಬಂಡೆ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇವು ನಿನ್ನೆ(ಬುಧವಾರ) ಕಂಡಿದ್ದ ಚಿರತೆಗಳಾ ಅಥವಾ ಬೇರೆ ಚಿರತೆಗಳೆ? ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಕಳೆದ ಒಂದು ವಾರದಿಂದ ನಿರಂತರ ಈ ಭಾಗದಲ್ಲಿ ಚಿರತೆಗಳು ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸಾರ್ವಜನಿಕರಲ್ಲಿ ಅಸಮಾಧಾನ: ಕಳೆದ ಹಲವು ದಿನಗಳಿಂದ ಚಿರತೆಗಳು ಜನವಸತಿ ಸನಿಹದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಸಂಬಂಧಿತ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ ಎಂಬ ಅಸಮಾಧಾನ ಜನರಲ್ಲಿ ವ್ಯಕ್ತವಾಗಿದೆ.