ಸಾವು ಹೇಗೆ ಬರುತ್ತದೆ? ಎಲ್ಲಿಂದ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಕ್ರೂರ ನಿದರ್ಶನ ಈ ಘಟನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಚೆನ್ನಿಗರಾಯ ಬಡಾವಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನೆಯ ಅಂಗಳದಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.
ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ಸಿ.ಎನ್. ಚಂದನ ಎಂಬಾಕೆಯೇ ಪ್ರಾಣ ಕಳೆದುಕೊಂಡವಳು. ಈಕೆ ಮನೆಯ ಅಂಗಳದಲ್ಲಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ.
ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಾಗ ತಲೆ ನೀರಿನ ಸಂಪ್‌ಗೆ ಬಡಿದಿದೆ. ಆಗ ಕಿವಿ ಹಾಗೂ ತಲೆಯ ಭಾಗಕ್ಕೆ ಹೆಚ್ಚು ಪೆಟ್ಟು ಬಿದ್ದಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ದಾರಿ ಮಧ್ಯೆ ಉಸಿರು ಚೆಲ್ಲಿದ್ದಾಳೆ.
ಬಿಜೆಪಿ ಮುಖಂಡ ನಂಜುಂಡ ಮೈಮ್ ಅವರ ಮಗಳಾದ ಚಂದನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದಳು. ಅತ್ಯಂತ ಪ್ರತಿಭಾವಂತೆಯಾಗಿದ್ದ ಆಕೆಯ ಸಾವು ಮನೆ ಮಂದಿಯನ್ನು ಕಂಗೆಡಿಸಿದೆ. ಚನ್ನರಾಯಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7