ಬೆಂಗಳೂರು: ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಅಧಿಕ ದರ ವಿಧಿಸುವ ಖಾಸಗಿ ಸಾರಿಗೆ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗ ಸಾರಿಗೆ ಇಲಾಖೆ ಮುಂದಾಗಿದೆ.
ಈ ಬಗ್ಗೆ ಅಧಿಕೃತ ಟ್ವೀಟ್ ಮಾಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಕೀಳುವ ಸಾರಿಗೆ ಸಂಸ್ಥೆಗಳ ಪರ್ಮಿಟ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಗೆ ತೊಂದರೆ ಕೊಡದೆ, ಯಾವ ಯಾವ ರೂಟ್‍ಗಳಿಗೆ ಎಷ್ಟು ದರ ನಿಗಧಿ ಪಡಿಸಿದೆಯೋ ಅಷ್ಟನ್ನು ಮಾತ್ರ ತೆಗೆದು ಕೊಳ್ಳಬೇಕು. ಅದನ್ನು ಬಿಟ್ಟು ಹೆಚ್ಚಿನ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ.
ದಸರಾ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ. ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಹೇಳಿದ್ದಾರೆ.