ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಬಾಲಿವುಡ್‌ನ ಕ್ಯೂಟ್ ಕಪಲ್. 2022 ಏಪ್ರಿಲ್ 14ರಂದು ಮದುವೆಯಾಗಿರುವ ಈ ಜೋಡಿ ಸದ್ಯ ತಂದೆ-ತಾಯಿಯಾಗುವ ಖುಷಿಯಲ್ಲಿದ್ದಾರೆ. ಜೊತೆಗೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ತೆರೆ ಮೇಲೆ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ‘ಬ್ರಹ್ಮಾಸ್ತ್ರ’ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಸದ್ಯ ಚಿತ್ರತಂಡ ಗೆಲುವಿನ ಖುಷಿಯಲ್ಲಿದೆ.
ರಣಬೀರ್ ಕಪೂರ್ ಅವರ ವಿವಾದಾತ್ಮಕ ಹೇಳಿಕೆಯೊಂದರಿಂದ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಬಾಯ್ಕಾಟ್ ಬಿಸಿ ತಟ್ಟಿತ್ತು. ಬಿಡುಗಡೆಗೂ ಮುನ್ನವೇ ಭಾರೀ ವಿವಾದದ ಸುಳಿವಿನಲ್ಲಿ ಸಿಲುಕಿದ್ದ ‘ಬ್ರಹ್ಮಾಸ್ತ್ರ’ ಚಿತ್ರ ಸದ್ಯ ವಿಶ್ವದಾದ್ಯಂತ 400 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಭಾರತದಲ್ಲೂ ಉತ್ತಮ ಗಳಿಕೆ ಮಾಡಿರುವ ಬ್ರಹ್ಮಾಸ್ತ್ರ ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿದೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕೂಡ ‘ಬ್ರಹ್ಮಾಸ್ತ್ರ’ ಯಶಸ್ಸಿನ ಸಂತಸದಲ್ಲಿದ್ದು, ಈ ಚಿತ್ರದ ಮೂಲಕ ಆಲಿಯಾ ಬಾಲಿವುಡ್ ನಟಿಯರ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಒಂದಾದ ಮೇಲೊಂದು ಖುಷಿಯ ವಿಚಾರವನ್ನೇ ಪಡೆಯುತ್ತಿರುವ ಆಲಿಯಾ ಭಟ್‌ಗೆ ಪ್ರಿಯದರ್ಶಿನಿ ಅಕಾಡೆಮಿ ಭಾರತೀಯ ಚಿತ್ರರಂಗದಲ್ಲಿ ನಟಿಯೊಬ್ಬರು ಪಡೆಯಬಹುದುದಾದ ಅತ್ಯುನ್ನತ ಗೌರವ ‘ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ’ ನೀಡಿ ಗೌರವಿಸಿದ್ದರು.
ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯಲ್ಲಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ರಣಬೀರ್ ಹಾಗೂ ಆಲಿಯಾ ತಮ್ಮ ಕ್ಯೂಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ. ತಮ್ಮ ಪುಟ್ಟ ಕುಟುಂಬಕ್ಕೆ ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವ ಈ ಜೋಡಿ, ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವದ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.