ಬೆಂಗಳೂರು : ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರು ನೇಮಕವಾಗಿದ್ದೇ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ.
ಪೌಲ್ ಬಗ್ಗೆ ದೂರುಗಳಿದ್ದರೂ, ಪ್ರಮುಖ ಹುದ್ದೆ ನೀಡಿದ್ದರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
ಕಲಾಪ ಮುಂದೂಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದ ಅವರು, ಪಿಎಸ್‌ಐ ಹಗರಣ ಬಯಲಿಗೆ ಎಳೆದದ್ದೇ ಕಾಂಗ್ರೆಸ್. ಸಿಐಡಿ ದಾಳಿ ನಂತರ ಪೌಲ್ ಅವರನ್ನು ವರ್ಗಾವಣೆ ಮಾಡಿದ್ದರು. ಒತ್ತಡ ಹೆಚ್ಚಾದ ಮೇಲೆ ಬಂಧಿಸಿದರು’ ಎಂದರು.
‘ಇಲ್ಲಿಯವರೆಗೂ ಎಜಿಡಿಪಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಿಆರ್‌ಪಿಸಿ 164ರ ಹೇಳಿಕೆ ಕೊಡಿಸಿಲ್ಲ. ಅವರ ಮಂಪರು ಪರೀಕ್ಷೆ ಆಗಬೇಕು. ಆಗ ಇದರ ಹಿಂದೆ ಇರುವ ರಾಜಕಾರಣಿಗಳ ಹೆಸರು ಬಯಲಿಗೆ ಬರುತ್ತದೆ’ ಎಂದರು.
‘ಬಿಜೆಪಿ ಶಾಸಕ ಬಸವರಾಜ ದಢೇಸೂಗುರ್ ಅವರು ಆಡಿಯೊದಲ್ಲಿನ ಧ್ವನಿ ನನ್ನದೆ, ನಾನು ₹ 15 ಲಕ್ಷ ತೆಗೆದುಕೊಂಡಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾನೆ. ಲಂಚ ಕೊಟ್ಟವರನ್ನೇ ಹೆದರಿಸಿದ್ದಾನೆ. ಅವನ ವಿಚಾರಣೆ ಮಾಡಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಹಗರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ಮಗನ ಕೈವಾಡವಿದೆ ಎಂದು ಹೇಳಿದ್ದಾರೆ. ಕೈವಾಡವಿರುವುದು ಯಡಿಯೂರಪ್ಪ ಅವರ ಮಗನಾ? ದೇವೇಗೌಡ, ಸಿದ್ದರಾಮಯ್ಯನ ಮಗನಾ’ ಎಂದು ಪ್ರಶ್ನಿಸಿದರು.
ಲಂಚದ ಹಣವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ದಢೇಸೂಗುರ್ ಹೇಳಿದ್ದಾರೆ. ಈಗ ಯಾವ ಸರ್ಕಾರ ಇದೆ? ಹಣಕೊಟ್ಟಿರುವುದು ಮುಖ್ಯಮಂತ್ರಿಗಾ? ಗೃಹ ಸಚಿವರಿಗಾ? ಹಗರಣದಲ್ಲಿ 92 ಜನರ ಬಂಧನವಾಗಿದೆ. ಆದರೆ, ಅವರಲ್ಲಿ ಒಬ್ಬ ರಾಜಕಾರಣಿಯೂ ಇಲ್ಲವೇ ಎಂದು ಕುಟುಕಿದರು.