ಬೆಳಗಾವಿ: ತರಕಾರಿ ಖರೀದಿ ವಿಷಯದಲ್ಲಿ ಬಹುತೇಕ ನೆರೆಯ ಬೆಳಗಾವಿಯನ್ನೇ ಅವಲಂಬಿಸಿರುವ ಗೋವಾ ಇಲ್ಲಿಂದ ತರಕಾರಿ ಖರೀದಿ ಮಾಡುವದನ್ನು ನಿಲ್ಲಿಸಲಿದೆ ಎಂಬ ವಿಚಾರ ರೈತ ಸಮುದಾಯ ಮತ್ತು ವ್ಯಾಪಾರಸ್ಥರಲ್ಲಿ ಸ್ವಲ್ಪಮಟ್ಟಿಗೆ ಚಿಂತೆ ಹುಟ್ಟಿಸಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಈ ಸುಳಿವು ನೀಡಿದ ಬೆನ್ನಲ್ಲೇ ಖಾಸಗಿ ಸಗಟು ತರಕಾರಿ ವ್ಯಾಪಾರಸ್ಥರು ಮುಂದಿನ ಪರಿಣಾಮದ ಬಗ್ಗೆ ಆಲೋಚನೆ ಆರಂಭಿಸಿದ್ದಾರೆ. ತಕ್ಷಣಕ್ಕೆ ಗೋವಾದ ಮುಖ್ಯಮಂತ್ರಿಗಳ ಈ ವಿಚಾರ ಕಾರ್ಯರೂಪಕ್ಕೆ ಬರುವುದು ಕಷ್ಟ. ಆದರೆ ಇದು ಸಹಜವಾಗಿಯೇ ಕರ್ನಾಟಕದ ವ್ಯಾಪಾರಸ್ಥರು ಮತ್ತು ರೈತರಲ್ಲಿ ಆತಂಕ ಉಂಟು ಮಾಡಿದೆ.
ಗೋವಾ ರಾಜ್ಯ ತರಕಾರಿ ಖರೀದಿಯಲ್ಲಿ ಸಂಪೂರ್ಣವಾಗಿ ಹೊರ ರಾಜ್ಯಗಳನ್ನೇ ಅವಲಂಬಿಸಿದೆ. ಗೋವಾಕ್ಕೆ ಈಗ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಟನ್‌ಗಳಷ್ಟು ತರಕಾರಿ ಬರುತ್ತದೆ. ಹೀಗಾಗಿ ತರಕಾರಿ ಬೆಳೆಯುವುದರಲ್ಲಿ ಸ್ವಾವಲಂಬನೆ ಬೆಳೆಸಿಕೊಳ್ಳಬೇಕು ಎಂಬುದು ಗೋವಾ ಮುಖ್ಯಮಂತ್ರಿಗಳ ಉದ್ದೇಶ.
ಗೋವಾ ಸರ್ಕಾರವು ಸದ್ಯ ಅಲ್ಲಿಯ ತೋಟಗಾರಿಕೆ ಇಲಾಖೆಯ ಸಹಕಾರ ಸಂಘದಿಂದ ನೇರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ತರಕಾರಿ ಖರೀದಿಸಿ ಅದನ್ನು ರಾಜ್ಯದ ಜನರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಬೇರೆ ಕಡೆಗಳಿಂದ ಖರೀದಿ ಮಾಡುವುದರ ಬದಲು ಇಲ್ಲಿಯೇ ಬೇಕಾದಷ್ಟು ಬೆಳೆ ತೆಗೆಯಲು ಆರಂಭ ಮಾಡಿದರೆ ಅದರಿಂದ ಹಣವೂ ಉಳಿಯುತ್ತದೆ. ಬೇರೆಯವರ ಮೇಲೆ ಅವಲಂಬನೆ ತಪ್ಪುತ್ತದೆ ಎಂಬುದು ಮುಖ್ಯಮಂತ್ರಿಗಳ ಆಲೋಚನೆ.