ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ಕಾನೂನು ಬದ್ದವಾಗಿ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯ, ವಾಲ್ಮೀಕಿ ಸಮುದಾಯ, ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೆಚ್ಚಳದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಅದು ಕಾನೂನು ಬದ್ದವಾಗಿರಬೇಕು. ಹಾಗಾಗಿ ಯಾರಿಗೂ ಕೂಡ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿಯ ಗಮನ ಸೆಳೆದರು.
ಆಯೋಗದ ವರದಿ ಬಂದ ಬಳಿಕ ಕ್ರಮ: ಇದಕ್ಕೆ ಸುದೀರ್ಘ ಉತ್ತರ ನೀಡಿದ ಸಿಎಂ, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕು ಎಂದು ಹಲವು ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಇದು ತಪ್ಪು ಎಂದು ನಾನು ಹೇಳುವುದಿಲ್ಲ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಿದ್ದೇವೆ.
ಆಯೋಗ ಈಗಾಗಲೇ 10ರಿಂದ 12 ಜಿಲ್ಲೆಗಳಿಗೆ ಭೇಟಿ ಕೊಟ್ಟಿದೆ. ಇನ್ನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬೇಕು. ಆದಷ್ಟು ಶೀಘ್ರ ವರದಿ ಸಲ್ಲಿಸಬೇಕೆಂದು ಆಯೋಗಕ್ಕೆ ಸೂಚನೆ ಕೊಟ್ಟಿದ್ದೇವೆ. ವರದಿ ಬಂದ ನಂತರ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ವೈಜ್ಞಾನಿಕವಾಗಿ ಮಾಡಬೇಕಾಗಿರುವುದರಿಂದ ಸಮಯ ಬೇಕಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.