Breaking News
Home / ರಾಜಕೀಯ / ಮಾತೇ ಇಲ್ಲ , ಕಥೆ ಇನ್ನೆಲ್ಲಿ? ಜತೆಯಾಗಿ ನಿಂತರೂ ಮಾತನಾಡದ ಮೋದಿ, ಕ್ಸಿ ಜಿನ್‌ಪಿಂಗ್‌

ಮಾತೇ ಇಲ್ಲ , ಕಥೆ ಇನ್ನೆಲ್ಲಿ? ಜತೆಯಾಗಿ ನಿಂತರೂ ಮಾತನಾಡದ ಮೋದಿ, ಕ್ಸಿ ಜಿನ್‌ಪಿಂಗ್‌

Spread the love

ಹೊಸದಿಲ್ಲಿ/ಸಮರಖಂಡ್‌: ಲಡಾಖ್‌ ಮತ್ತು ಗಾಲ್ವಾನ್‌ ಘರ್ಷಣೆ ಬಳಿಕ ಭಾರತ ಮತ್ತು ಚೀನ ನಡುವಿನ ಸಂಬಂಧ ತೀರಾ ಎನ್ನುವಷ್ಟರ ಮಟ್ಟಿಗೆ ಹಳಸಿದ್ದು, ಇದು ಉಜ್ಬೇಕಿಸ್ಥಾನದ ಸಮರಖಂಡ್‌ನ‌ಲ್ಲೂ ವ್ಯಕ್ತವಾಯಿತು. ವಿಶೇಷವೆಂದರೆ, 2 ದಿನಗಳ ಶಾಂಘೈ ಸಹಕಾರ ಸಭೆಯ ನೆನಪಿನ ಗ್ರೂಪ್‌ ಫೋಟೋಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಯಲ್ಲೇ ನಿಂತರೂ ಒಂದೂ ಮಾತನಾಡಲಿಲ್ಲ.

 

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಪಾಕಿಸ್ಥಾನ ಪ್ರಧಾನಿ ಶಹಭಾಜ್‌ ಷರೀಫ್, ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಹಲವು ದೇಶಗಳ ನಾಯಕರು ಭಾಗಿಯಾಗಿದ್ದರು. ಮುಂದಿನ ಬಾರಿ ಈ ಸಭೆ ಭಾರತದಲ್ಲಿ ನಡೆಯಲಿದ್ದು, ಭಾರತವೇ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ.

ಮಹತ್ವದ ಸಭೆ
ಸಮರಖಂಡ್‌ನ‌ ಸಭೆಯಲ್ಲಿ ಏಷ್ಯಾದ ಪ್ರಮುಖ ದೇಶಗಳು ಭಾಗಿಯಾಗಿರುವುದಲ್ಲದೇ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿರುವ ಹೊತ್ತಿ ನಲ್ಲೇ ನಡೆಯು ತ್ತಿದೆ. ರಷ್ಯಾ ವಿರುದ್ಧ ಅಮೆರಿಕ, ಯುಕೆ ಮೊದಲ್ಗೊಂಡು ಪಾಶ್ಚಿಮಾತ್ಯ ದೇಶಗಳು ದಿಗ್ಬಂಧನ ಹೇರಿದ್ದು, ಆರ್ಥಿಕ ವಹಿವಾಟಿಗೂ ಕಡಿವಾಣ ಹಾಕಿವೆ. ಅಲ್ಲದೆ, ರಷ್ಯಾ ಕ್ರಮ ಖಂಡಿಸದ ಚೀನ ವಿರುದ್ಧವೂ ಪಾಶ್ಚಿಮಾತ್ಯ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಭಾರತದ ವಿಷಯದಲ್ಲಿ ಮಾತ್ರ ಕೊಂಚ ಮೃದು ಧೋರಣೆ ಅನುಸರಿಸಿವೆ.

ಹೀಗಾಗಿ ಯುದ್ಧ ಶುರುವಾದ ಮೇಲೆ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ರಷ್ಯಾ ಭಾಗಿ ಯಾಗುತ್ತಿರುವುದು ಇದೇ ಮೊದಲು. ಪುತಿನ್‌ ಜತೆಗೆ, ಚೀನ, ಭಾರತ ಸೇರಿದಂತೆ ಹಲವು ದೇಶಗಳು ಮಾತು ಕತೆ ನಡೆಸಿರುವುದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೂ ಕಾರಣವಾಗುವ ಸಂಭವವಿದೆ.

ಯುದ್ಧದ ಕಾಲವಲ್ಲ ಇದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ ಬಗ್ಗೆ ಪ್ರಸ್ತಾವಿಸಿದ ಮೋದಿ ಅವರು, ಇದು ಯುದ್ಧ ಮಾಡುವ ಕಾಲವಲ್ಲ. ಆದಷ್ಟು ಬೇಗ ಯುದ್ಧ ನಿಲ್ಲಿಸಿ ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಪುತಿನ್‌, ನಿಮ್ಮ ಕಳವಳ ಅರ್ಥವಾಗುತ್ತದೆ. ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಹೇಳಿದರು.

ಪುತಿನ್‌ ಜತೆಗಿನ ಮಾತುಕತೆ ವೇಳೆ, ಆಹಾರ, ತೈಲ ಮತ್ತು ರಸಗೊಬ್ಬರದ ಪೂರೈಕೆ ಬಗ್ಗೆ ಚರ್ಚಿಸಿದರು. ಸದ್ಯ ಈ ಕುರಿತಂತೆ ಕೆಲವು ಸಮಸ್ಯೆಗಳು ಉಂಟಾಗಿವೆ. ಇವುಗಳನ್ನು ಬಗೆಹರಿಸಬೇಕಿದೆ ಎಂದು ಪುತಿನ್‌ಗೆ ಮೋದಿ ಅವರು ಮನವರಿಕೆ ಮಾಡಿಕೊಟ್ಟರು.

ಶೇ.7.5ರಷ್ಟು ಪ್ರಗತಿ ಸಾಧ್ಯತೆ
ಕೊರೊನಾ ಅಡ್ಡಿಯ ಮಧ್ಯೆಯೂ ಭಾರತದ ಆರ್ಥಿಕತೆಯನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಶೇ.7.5ರಷ್ಟು ಪ್ರಗತಿ ಕಾಣಲಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಮಧ್ಯೆ ಯಾವುದೇ ಅಡೆತಡೆ ಇಲ್ಲದಂತೆ ಸರಕು ಸಾಗಣೆಗೆ ವ್ಯವಸ್ಥೆಯಾಗಬೇಕು ಎಂದು ಒತ್ತಿ ಹೇಳಿದರು. ಇದರಿಂದ ಆರ್ಥಿಕತೆಯೂ ಬೆಳವಣಿಗೆಯಾಗುತ್ತದೆ ಎಂದರು.

ಮುಖಾಮುಖಿಯಾದರೂ ಮಾತಿಲ್ಲ
ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಗ್ರೂಪ್‌ ಫೋಟೋ ತೆಗೆಸಿ ಕೊಳ್ಳುವಾಗ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಒಟ್ಟಿಗೇ ನಿಂತಿದ್ದರು. ಆದರೆ ಕೈಕುಲುಕುವು ದಾಗಲಿ, ಶುಭಾಶಯವಾಗಲೀ ಕಡೇ ಪಕ್ಷ ನಗುವನ್ನೂ ವಿನಿಮಯ ಮಾಡಿಕೊಳ್ಳಲಿಲ್ಲ. ಇವರಿಬ್ಬರೂ ಪರಸ್ಪರ ಭೇಟಿಯಾಗಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಈ ಮಧ್ಯೆ, ಪಾಕಿಸ್ಥಾನ ಪ್ರಧಾನಿ ಶಹಭಾಜ್‌ ಷರೀಫ್ ಅವರ ಜತೆಗೂ ನರೇಂದ್ರ ಮೋದಿಯವರು ಯಾವುದೇ ಮಾತುಕತೆ ನಡೆಸಲಿಲ್ಲ.

ಎಸ್‌ಇಒಗೆ ಭಾರತವೇ ಅಧ್ಯಕ್ಷ
ಸದ್ಯ ಶಾಂಘೈ ಸಹಕಾರ ಒಕ್ಕೂಟದ ಅಧ್ಯಕ್ಷ ಸ್ಥಾನ ಉಜ್ಬೇಕಿಸ್ಥಾನದ ಬಳಿ ಇತ್ತು. ಈ ಸಭೆ ಮುಗಿದ ಬಳಿಕ ಅಧ್ಯಕ್ಷ ಸ್ಥಾನ ಭಾರತದ ಮುಡಿಗೆ ಬಂದಿದೆ. ಹೀಗಾಗಿ 2023ರ ಸಭೆ ಭಾರತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಭಾರತಕ್ಕೆ ಶುಭ ಕೋರಿದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಆದರೆ ಈ ಶೃಂಗ ಸಭೆಯಲ್ಲಿ ಭಾಗಿಯಾಗ ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪಾಕಿಸ್ಥಾನ ಹೇಳಿದೆ.


Spread the love

About Laxminews 24x7

Check Also

170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

Spread the love ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ