ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಖೊಟ್ಟಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನನಗೆ ಸೂಕ್ತ ರಕ್ಷಣೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಹೌದು 2012ರಲ್ಲಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾನೂನು ಬಾಹಿರವಾಗಿ ಆಸ್ತಿ ಗಳಿಸಿದ ಕುರಿತು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ದೂರು ನೀಡಿದ್ದಾರೆ. ಇದರಿಂದ ಶಾಸಕ ಅಭಯ್ ಪಾಟೀಲ್ ಸುಮಾರು ಬಾರಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಸುಜೀತ್ ಮುಳಗುಂದ ಆರೋಪಿಸಿದ್ದಾರೆ.
ನಿನ್ನನ್ನು ನೋಡಿಕೊಳ್ಳುತ್ತೇನೆ, ಯಾವುದಾದರೂ ಕೇಸ್‍ನಲ್ಲಿ ನಿನ್ನನ್ನು ಸಿಲುಕಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಖೊಟ್ಟಿ ಪ್ರಕರಣದಲ್ಲಿ ನನ್ನ ಸಿಲುಕಿಸಲು ಪ್ರಯತ್ನ ಕೂಡ ಮಾಡಿದ್ದಾರೆ. ಇದೆಲ್ಲಾ ನಾನು ಹಾಕಿದ ಲಂಚ ಪ್ರಕರಣ ಹಿಂದೆ ಪಡೆಯಲು ನಡೆಸಿದು ಒಂದು ರಣತಂತ್ರವಾಗಿದೆ. ನಾನು ಈ ಬಗ್ಗೆ ಭಾರತ ಸುಪ್ರೀಂಕೋರ್ಟನ ಮುಖ್ಯ ನ್ಯಾಯಾಧೀಶರು ಹಾಗೂ ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದಿದ್ದೇನೆ.
ತಮ್ಮ ವಿರೋಧಿಗಳನ್ನು ಹತೋಟಿಯಲ್ಲಿ ಇಡಲು ಖೊಟ್ಟಿ ಕೇಸ್‍ನಲ್ಲಿ ಸಿಲುಕಿಸುವ ತಂತ್ರ ನಡೆಸಿರುತ್ತಾರೆ. ಈಗಾಗಲೇ ನ್ಯಾಯವಾದಿಗಳಾದ ಎನ್.ಆರ್.ಲಾತೂರ್ ಹಾಗೂ ಸಾಮಾಜಿಕ ಕಾರ್ಯಕರ್ತ ಮಧುಮಂಗಳ ಕಲಂತ್ರಿ ಸೇರಿದಂತೆ ಇನ್ನೂ ಲೆಕ್ಕವಿಲ್ಲದಷ್ಟು ಮುಗ್ದರನ್ನು ಸಮಸ್ಯೆಗೆ ತಳ್ಳಿದ್ದಾರೆ.
ಇನ್ನು ನನ್ನ ಮೇಲೆ ಪೊಲೀಸ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಯಾವುದಾದ್ರೂ ಖೊಟ್ಟಿ ಕೇಸ್‍ನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಹೀಗಾಗಿ ನನಗೆ ಸೂಕ್ತ ರಕ್ಷಣೆ ನೀಡುವಂತೆ ಸುಜೀತ್ ಮುಳಗುಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.