ಕಾರವಾರ (ಉತ್ತರಕನ್ನಡ): ಅಕ್ರಮವಾಗಿ ಕಾರಿನಲ್ಲಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬ, ಪೊಲೀಸರು ತಪಾಸಣೆ ಮಾಡುತ್ತಿರುವುದನ್ನು ಕಂಡು ಕಾರನ್ನು ಹೆದ್ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆ ತಾಲೂಕಿನ ಸದಾಶಿವಗಡದ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರಿಗೆ ಬಂದ ಮಾಹಿತಿಯಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿಎಸ್ಐ ಪ್ರೇಮನಗೌಡ ಪಾಟೀಲ್, ಹೆಡ್ ಕಾನ್ಸ್‌ಟೇಬಲ್ ರಾಘವೇಂದ್ರ ಜಿ., ಪೊಲೀಸ್ ಕಾನ್ಸ್ಟೇಬಲ್ಗಳಾದ ಭಗವಾನ ಗಾಂವಕರ, ಸಂತೋಷ್ ಕುಮಾರ್, ಮಹಾದೇವ ಸಿದ್ದಿ ಅವರ ತಂಡ ತಪಾಸಣೆ ನಡೆಸುತ್ತಿತ್ತು.

ಗೋವಾದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದ ಕಡೆಗೆ ಬರುತ್ತಿದ್ದ ಹುಂಡೈ ವೆರ್ನಾ ಕಾರನ್ನ ಪರಿಶೀಲಿಸಲು ಸದಾಶಿವಗಡದ ದೇವಭಾಗ ಕ್ರಾಸ್ನಲ್ಲಿ ಬ್ಯಾರಿಕೇಡ್ ಹಾಕಿ ಪಹರೆ ನಿಂತಿದ್ದರು. ಇದನ್ನು ಅನತಿ ದೂರದಿಂದಲೇ ಕಂಡು ಭಯಬೀತನಾದ ಚಾಲಕ ಕಾರನ್ನು ಹೆದ್ದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಸುಮಾರು 1.5 ಲಕ್ಷ ಬೆಲೆಯ 27 ಪಾಲಿಥಿನ್ ಚೀಲಗಳಲ್ಲಿ 770 ಲೀ. ಗೋವಾ ರಾಜ್ಯದ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
Laxmi News 24×7