ಬೆಳಗಾವಿ : ‘ರಾಜ್ಯದಲ್ಲಿ ಮೊದಲ ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ.
ಈಗ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಏಕರೂಪದ ಪಠ್ಯಕ್ರಮವಿದೆ’ ಎಂದು ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು 2019ರಲ್ಲಿ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪಠ್ಯಕ್ರಮ ಪರಿಷ್ಕರಿಸಿದ್ದೆ. ಆಗ ಮೂರು ವರ್ಷಗಳಿಗೊಮ್ಮೆ ಸ್ನಾತಕೋತ್ತರ ಕೋರ್ಸ್‌ಗಳ ಪಠ್ಯಕ್ರಮ ಹಾಗೂ ಐದು ವರ್ಷಗಳಿಗೊಮ್ಮೆ ಸ್ನಾತಕ ಕೋರ್ಸ್‌ಗಳ ಪಠ್ಯಕ್ರಮ ಪರಿಷ್ಕರಣೆಗೆ ಅವಕಾಶವಿತ್ತು. ಎನ್‌ಇಪಿ ಅನುಷ್ಠಾನಗೊಂಡ ನಂತರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಏಕರೂಪದ ಪಠ್ಯಕ್ರಮ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ಆಯಾ ವಿಶ್ವವಿದ್ಯಾಲಯಕ್ಕೆ ಶೇ.10 ಪಠ್ಯಕ್ರಮವನ್ನು ಹೆಚ್ಚುವರಿಯಾಗಿ ಸೇರಿಸಲು ಹಾಗೂ ಕಡಿತಗೊಳಿಸಲು ಅವಕಾಶವಿದೆ’ ಎಂದರು.
‘ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ(ಯುಯುಸಿಎಂಎಸ್) ಜಾರಿಗೆ ತರಲಾಗಿದೆ. ಪ್ರವೇಶ ಪ್ರಕ್ರಿಯೆ, ಪರೀಕ್ಷೆ, ಫಲಿತಾಂಶದ ದಾಖಲೆಗಳು, ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರಗಳನ್ನು ಇದರಲ್ಲಿಯೇ ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೊತೆಗೆ, ಘಟಿಕೋತ್ಸವ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ. ಕೆಲವೊಮ್ಮೆ ರಾಜ್ಯದಾದ್ಯಂತ ಹೆಚ್ಚಿನ ವಿದ್ಯಾರ್ಥಿಗಳು ಏಕಕಾಲಕ್ಕೆ ಲಾಗಿನ್ ಮಾಡುವುದರಿಂದ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಂತರ ವೆಬ್‌ಸೈಟ್ ಮತ್ತೆ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.