Breaking News

ಸೈಮಾ 2022: ಕನ್ನಡದ ಅತ್ಯುತ್ತಮ ನಟ, ಚಿತ್ರ, ನಿರ್ದೇಶಕ, ನಟಿ ಪ್ರಶಸ್ತಿ ಯಾರ ಪಾಲು? ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

Spread the love

ನಿನ್ನೆ ( ಸೆಪ್ಟೆಂಬರ್ 10 ) ಈ ಬಾರಿಯ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಮೊದಲ ದಿನದ ಕಾರ್ಯಕ್ರಮ ಜರುಗಿತು. ದಕ್ಷಿಣ ಭಾರತ ಚಿತ್ರರಂಗದ ನಾಲ್ಕೂ ಭಾಷೆಯ ಚಿತ್ರಗಳಿಗೆ ಪ್ರತ್ಯೇಕವಾಗಿ ಈ ಸೈಮಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಟ್ಟು 19 ವಿಭಾಗಗಳಲ್ಲಿ ಈ ಬಾರಿ ಕಲಾವಿದರ ನಾಮಿನೇಷನ್ ನಡೆದಿತ್ತು ಹಾಗೂ ಸೈಮಾ ವೆಬ್ ತಾಣದಲ್ಲಿ ಸಿನಿ ರಸಿಕರಿಗೆ ಬೆಸ್ಟ್ ಯಾರು ಎಂದು ವೋಟ್ ಮಾಡುವ ಅವಕಾಶವನ್ನು ಸಹ ನೀಡಲಾಗಿತ್ತು.

 

ಇನ್ನು ಕನ್ನಡದ ಪರ ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ 10 ಕೆಟಗರಿಯಲ್ಲಿ ನಾಮ ನಿರ್ದೇಶನ ಆಗುವುದರ ಮೂಲಕ ಅತಿ ಹೆಚ್ಚು ಕೆಟಗರಿಯಲ್ಲಿ ನಾಮಿನೇಟ್ ಆದ ಕನ್ನಡದ ಸಿನಿಮಾ ಎನಿಸಿಕೊಂಡಿತ್ತು. ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ 8 ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ 7 ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು.

ಇಷ್ಟೇ ಅಲ್ಲದೆ ಧನಂಜಯ್ ಅಭಿನಯದ ಬಡವ ರಾಸ್ಕಲ್, ರತ್ನನ್ ಪರ್ಪಂಚ, ದೃಶ್ಯ 2, ನಿನ್ನ ಸನಿಹಕೆ, ಲವ್ ಯೂ ರಚ್ಚು ಚಿತ್ರಗಳು ಸಹ ವಿವಿಧ ಕೆಟಗರಿಯಲ್ಲಿ ನಾಮಿನೇಟ್ ಆಗಿದ್ದವು. ಇದೀಗ ಮೊದಲ ದಿನ ಮುಕ್ತಾಯದ ನಂತರ ಈ ಪೈಕಿ ಯಾವ ವಿಭಾಗಗಳಲ್ಲಿ ಯಾರಿಗೆ ಮತ್ತು ಯಾವ ಚಿತ್ರಕ್ಕೆ ಪ್ರಶಸ್ತಿ ದಕ್ಕಿದೆ ಎಂಬುದರ ಕುರಿತಾದ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.

ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ
 ಕಳೆದ ವರ್ಷ ನಮ್ಮನೆಲ್ಲ ಅಗಲಿದ ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಯುವರತ್ನ ಚಿತ್ರದಲ್ಲಿನ ತಮ್ಮ ಅತ್ಯುತ್ತಮ ಅಭಿನಯಕ್ಕೆ ಪುನೀತ್ ರಾಜ್ ಕುಮಾರ್ ಈ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಈ ಪ್ರಶಸ್ತಿಯನ್ನು ಯುವರತ್ನ ಚಿತ್ರತಂಡ ಹಾಗೂ ಕಾರ್ಯಕ್ರಮಕ್ಕೆ ತೆರಳಿದ್ದ ಇತರೆ ಕನ್ನಡ ಚಿತ್ರರಂಗದ ಕೆಲ ಕಲಾವಿದರು ಪುನೀತ್ ರಾಜ್ ಕುಮಾರ್ ಪರವಾಗಿ ಸ್ವೀಕರಿಸಿದರು. ಈ ಮೂಲಕ ಪುನೀತ್ ರಾಜ್ ಕುಮಾರ್ ಐದನೇ ಸೈಮಾ ಅವಾರ್ಡ್ಸ್ ಅನ್ನು ತಮ್ಮದಾಗಿಸಿಕೊಂಡರು.

ಅತ್ಯುತ್ತಮ ಚಿತ್ರ ಯಾವುದು?

ಅತ್ಯುತ್ತಮ ಚಿತ್ರ ಕೆಟಗರಿಯಲ್ಲಿ ಯುವರತ್ನ, ರಾಬರ್ಟ್, ಗರುಡಗಮನ ವೃಷಭವಾಹನ, ಭಜರಂಗಿ 2 ಹಾಗೂ ಸಲಗ ಚಿತ್ರಗಳು ನಾಮನಿರ್ದೇಶನಗೊಂಡಿದ್ದವು. ಈ ಪೈಕಿ ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದ ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅತ್ಯುತ್ತಮ ನಟಿಯರು

ಇನ್ನು ಸೈಮಾ ಕನ್ನಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಕ್ರಿಟಿಕ್ಸ್ ಹಾಗೂ ಪಾಪುಲರ್ ಎಂಬ 2 ವಿಭಾಗಗಳಲ್ಲಿ ನೀಡಲಾಗಿದೆ. ಅತಿ ಹೆಚ್ಚು ವೋಟ್ ಪಡೆದು ಗೆದ್ದ ಆಶಿಕಾ ರಂಗನಾಥ್ ಮದಗಜ ಚಿತ್ರಕ್ಕಾಗಿ ಅತ್ಯುತ್ತಮ ಜನಪ್ರಿಯ ನಟಿ ಪ್ರಶಸ್ತಿಯನ್ನು ಪಡೆದರು ಹಾಗೂ ಬಡವ ರಾಸ್ಕಲ್ ಚಿತ್ರಕ್ಕಾಗಿ ಅಮೃತಾ ಅಯ್ಯಂಗಾರ್ ಅತ್ಯುತ್ತಮ ನಟಿ ಕ್ರಿಟಿಕ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಅತ್ಯುತ್ತಮ ನಿರ್ದೇಶಕ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ರಾಬರ್ಟ್ ನಿರ್ದೇಶನ ಮಾಡಿದ್ದ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಚಿತ್ರ – ಗರುಡ ಗಮನ ವೃಷಭ ವಾಹನ

ಅತ್ಯುತ್ತಮ ನಿರ್ದೇಶಕ – ತರುಣ್ ಸುಧೀರ್ (ರಾಬರ್ಟ್)

ಅತ್ಯುತ್ತಮ ಛಾಯಾಗ್ರಾಹಕ – ಸುಧಾಕರ್ ರಾಜ್ (ರಾಬರ್ಟ್)

ಅತ್ಯುತ್ತಮ ನಟ – ಪುನೀತ್ ರಾಜ್‌ಕುಮಾರ್ (ಯುವರತ್ನ)

ಅತ್ಯುತ್ತಮ ನಟಿ – ಅಮೃತ ಅಯ್ಯಂಗಾರ್ – ( ಬಡವ ರಾಸ್ಕಲ್ )

ಅತ್ಯುತ್ತಮ ಪೋಷಕ ನಟ – ಪ್ರಮೋದ್ (ರತ್ನನ್ ಪ್ರಪಂಚ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಆರೋಹಿ ನಾರಾಯಣ (ದೃಶ್ಯ 2)

ಅತ್ಯುತ್ತಮ ಖಳನಟ – ಪ್ರಮೋದ್ ಶೆಟ್ಟಿ (ಹೀರೊ)

ಅತ್ಯುತ್ತಮ ಹಾಸ್ಯನಟ – ಚಿಕ್ಕಣ್ಣ (ಪೊಗರು)

ಅತ್ಯುತ್ತಮ ಉದಯೋನ್ಮುಖ ನಟ – ನಾಗಭೂಷಣ ಎನ್ ಎಸ್ (ಇಕ್ಕಟ್)

ಅತ್ಯುತ್ತಮ ಉದಯೋನ್ಮುಖ ನಟಿ – ಶರಣ್ಯ ಶೆಟ್ಟಿ (1980)

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ – ಗುರು ಶಂಕರ್ (ಬಡವ ರಾಸ್ಕಲ್)

ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ – ಕೆಆರ್‌ಜಿ ಸ್ಟುಡಿಯೋಸ್ (ರತ್ನನ್ ಪ್ರಪಂಚ)

ಅತ್ಯುತ್ತಮ ಸಂಗೀತ ನಿರ್ದೇಶಕ – ಅರ್ಜುನ್ ಜನ್ಯ (ರಾಬರ್ಟ್)

ಅತ್ಯುತ್ತಮ ಗೀತರಚನೆಕಾರ – ವಾಸುಕಿ ವೈಭವ್ – ನಿನ್ನ ಸನಿಹಕೆಯಿಂದ “ನಿನ್ನ ಸನಿಹಕೆ”

ಅತ್ಯುತ್ತಮ ಹಿನ್ನೆಲೆ ಗಾಯಕ – ಅರ್ಮಾನ್ ಮಲಿಕ್, ಥಮನ್ ಎಸ್ – ಯುವರತ್ನದಿಂದ “ನೀನಾದೆ ನಾ”

ಅತ್ಯುತ್ತಮ ಹಿನ್ನೆಲೆ ಗಾಯಕಿ – ಚೈತ್ರ ಜೆ ಆಚಾರ್ – “ಸೂಜುಗದ ಸೂಜುಮಲ್ಲಿಗೆ” ಫ್ರಮ್ ಗರುಡ ಗಮನ ವೃಷಭ ವಾಹನ


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ