ಬೆಂಗಳೂರು, ಸೆ.7: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ನಡೆಸಿದ ಸಹಾಯಕರ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿ ಕೆಪಿಎಸ್‍ಸಿ ಸಿಬ್ಬಂದಿ ಬಸವರಾಜ ಎಲ್.ಕುಂಬಾರ್, ಸನಾ ಬೀಡಿ, ರಾಮಪ್ಪ ಎ. ಹೆರಕಲ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಪ್ರಕಟನೆ ಹೊರಡಿಸಿದ್ದಾರೆ.
2020ರ ಜ.31ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ದೆಹಲಿಯ ಕರ್ನಾಟಕ ಭವನದ ಖಾಲಿ ಹುದ್ದೆಗಳಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. 2021ರ ಜ.24ರಂದು ಪರೀಕ್ಷಾ ದಿನಾಖವನ್ನು ನಿಗದಿಪಡಿಸಲಾಗಿತ್ತು. ಆದರೆ ಆಯೋಗದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಪರೀಕ್ಷಾ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದರಿಂದ ಪರೀಕ್ಷೆಯನ್ನು ಮುಂದೂಡಿ, ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಪ್ರಕರಣದ ಜಂಟಿ ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾದ ಕಾರಣ ವಿಚಾರಣಾಧಿಕಾರಿ ಸಲ್ಲಿಸಿದ ವರದಿಯನ್ನು ಅಂಗೀಕರಿಸಿದ ಆಯೋಗವು ಆ.26ರಿಂದ ಕೆಪಿಎಸ್‍ಸಿ ಸಿಬ್ಬಂದಿ ಬಸವರಾಜ ಎಲ್.ಕುಂಬಾರ್, ಸನಾ ಬೀಡಿ, ರಾಮಪ್ಪ ಎ. ಹೆರಕಲ್ ಅವರನ್ನು ಮುಂದೆ ಉದ್ಯೋಗಕ್ಕೆ ಅನರ್ಹರಾಗದಂತೆ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.