ವಿಜಯನಗರ, ಸೆಪ್ಟೆಂಬರ್ 6: “ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆ” ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಹೇಳಿದರು.
ಹೊಸಪೇಟೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, “ಬಿಜೆಪಿ ದುರಾಡಳಿತಕ್ಕೆ ಬೇಸತ್ತಿರುವ ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ ಈ ಸಲ ಶೇ 50ಕ್ಕೂ ಹೆಚ್ಚು ಲಿಂಗಾಯತರ ಮತಗಳು ಕಾಂಗ್ರೆಸ್‌ಗೆ ಬೀಳಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಬಿಜೆಪಿಯಿಂದ ದೇಶದ ಅಭಿವೃದ್ಧಿ ಶೂನ್ಯವಾಗಿದ್ದು, ಎಲ್ಲೆಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್, ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರೂ ಹಾಕುವುದು ಸೇರಿದಂತೆ ಅನೇಕ ಹುಸಿ ಭರವಸೆಗಳನ್ನು ನೀಡಿರುವ ಮೋದಿಯವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ” ಎಂದರು.
“ಸ್ವಾತಂತ್ರ್ಯಪೂರ್ವದಿಂದಲೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ದೇಶಕ್ಕೆ ಯಾವ ಕೊಡುಗೆ ನೀಡಿದೆ. ಪ್ರಾಥಮಿಕ ಶಾಲೆಯಿಂದ ಐಐಟಿವರೆಗೂ, ಅಣೆಕಟ್ಟು, ವಿದ್ಯುತ್ ಸ್ಥಾವರಗಳಿಂದ ಹಿಡಿದು ಪಡಿತರ ವ್ಯವಸ್ಥೆ ಸೇರಿದಂತೆ ವೃದ್ಧಾಪ್ಯ ವೇತನ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ ಅವಿಸ್ಮರಣೀಯ. ಇದ್ಯಾವುದು ಕೂಡ ನರೇಂದ್ರ ಮೋದಿ ಸಾಧನೆಯಲ್ಲ. ಅಧಿಕಾರಕ್ಕೆ ಬಂದ ತಕ್ಷಣ ಉದ್ಯೋಗ ಸೃಷ್ಟಿಸಲಾಗುವುದು ಎಂದಿದ್ದ ಅವರು ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದಾರೆ” ಎಂದು ಟೀಕಿಸಿದರು.
“ಪೆಟ್ರೋಲ್, ಡಿಸೇಲ್, ಎಣ್ಣೆ, ಅಕ್ಕಿ, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಬಿಜೆಪಿಯ ಸಾಧನೆ. 52 ವರ್ಷಗಳ ನಂತರ ಆರ್‌ಎಸ್‌ಎಸ್ ತನ್ನ ಕಚೇರಿಯಲ್ಲಿ ಧ್ವಜಾರೋಹಣ ಮಾಡಿರಲಿಲ್ಲ, ಇಂದು ದೇಶ ಭಕ್ತಿಯನ್ನು ಬೋಧಿಸಲು ಹೋರಟಿದ್ದಾರೆ. ಏನು ಮಾಡದೆ ಪ್ರಚಾರ ಪಡೆಯುವ ಬಿಜೆಪಿ ಇಂದು ಅಧಿಕಾರದಲ್ಲಿದೆ. ನಾವು ಎಲ್ಲವನ್ನೂ ಮಾಡಿ ಪ್ರಚಾರ ಪಡೆಯುವಲ್ಲಿ ವಿಫಲವಾಗಿದ್ದೇವೆ. ಕೋಮುಭಾವನೆ ಸೃಷ್ಟಿ, ಬೆಲೆ ಏರಿಕೆ, 40% ಕಮೀಷನ್‌ನಿಂದ ಬಿಜೆಪಿ ನೆಲಕಚ್ಚಿಹೋಗಲಿದೆ. ಕಾಂಗ್ರೆಸ್ 150ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ಐತಿಹಾಸಿಕ ದಾಖಲೆ ಹಾಗೂ ಜನಪರ ಸರಕಾರ ಆಡಳಿತ ವ್ಯವಸ್ಥೆ ಜಾರಿಯಾಗಲಿದೆ” ಎಂದರು.
“ಕಳೆದ ಸಲ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದವರ ಪೈಕಿ ಗರಿಷ್ಟ ಶೇ.75 ರಿಂದ 50 ರಷ್ಟು ಮತದಾರರು ಕಾಂಗ್ರೆಸ್‍ಗೆ ಬೆಂಬಲ ನೀಡಲಿದ್ದಾರೆ . ನಾನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ಹೇಳಲಾರೆ, ಆದರೆ ಲಿಂಗಾಯತ ಸಮುದಾಯ ಈ ಸಲ ಕಾಂಗ್ರೆಸ್ ಪಕ್ಷವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಯಡಿಯೂರಪ್ಪರಿಗೆ ಅನ್ಯಾಯ ಆಗಿದೆ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, “ಅವರಿಗೆ ಬಿಜೆಪಿಯಿಂದ ಅನ್ಯಾಯ ಆಗಿರುವ ಕಾರಣ ಲಿಂಗಾಯತರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ ಹೇಳಿದ್ದೇನೆ” ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು.