ಸ್ಯಾಂಡಲ್‌ವುಡ್‌ನ ಶಿಸ್ತಿನ ನಿರ್ದೇಶಕ ಎಂದೇ ಖ್ಯಾತಿ ಪಡೆದಿರೋ ಎಸ್ ನಾರಾಯಣ್ ಹಾಗೂ ಅವರ ಪುತ್ರ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪುತ್ರ ಪವನ್ ಎಸ್ ನಾರಾಯಣ್ ನೇತೃತ್ವದಲ್ಲಿ ‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ಯನ್ನು ಆರಂಭಿಸಿದ್ದಾರೆ.
ಶಿಕ್ಷಕರ ದಿನದಂದು ಕನ್ನಡ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ಯನ್ನು ಉದ್ಘಾಟನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ ಈ ನೂತನ ಫಿಲ್ಮ್ ಅಕಾಡೆಮಿಯನ್ನು ಉದ್ಘಾಟಿಸಿದ್ರೆ, ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ಮಾಪಕ ಎಂ.ಎನ್ ಸುರೇಶ್, ನಾಯಕ ನಟ ಆದಿತ್ಯ ಹಾಗೂ ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ಜೊತೆಯಾಗಿದ್ದಾರೆ.
ಎಸ್ ನಾರಾಯಣ್ ಪುತ್ರನ ಹೊಸ ಸಾಹಸಕ್ಕೆ ಹಿರಿಯ ನಿರ್ದೇಶಕ ಭಾರ್ಗವ ಶುಭ ಕೋರಿದರು. ” ಎಸ್ ನಾರಾಯಣ್ ನನ್ನನ್ನು ಚೆನ್ನೈನಲ್ಲಿ ಭೇಟಿಯಾಗಿ, ಅವರ ವೃತ್ತಿಜೀವನ ಆರಂಭಿಸಿದ್ರು. ಕೆಲಸದ ಮೇಲೆ ಅವರಿಗಿರುವ ಶ್ರದ್ಧೆಯಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಈಗ ಅವರ ಪುತ್ರ ಈಗ ಫಿಲ್ಮ್ ಅಕಾಡೆಮಿಯನ್ನು ಆರಂಭಿಸಿದ್ದಾರೆ. ಪವನ್ ನಾರಾಯಣ್ ಅವರ ಈ ನೂತನ ಪ್ರಯತ್ನಕ್ಕೆ ಒಳ್ಳೆಯದಾಗಲಿ” ಎಂದು ಹಿರಿಯ ನಿರ್ದೇಶಕ ಭಾರ್ಗವ ಹಾರೈಸಿದ್ದಾರೆ
ನಿರ್ದೇಶಕ ಎಸ್ ನಾರಾಯಣ್‌ಗೆ ಹಿರಿಯ ನಿರ್ದೇಶಕ ಭಾರ್ಗವ ಅವರೇ ಗುರುಗಳು. ಹಾಗಾಗಿ ಅವರಿಂದಲೇ ಈ ಫಿಲ್ಮ್ ಅಕಾಡೆಮಿಯನ್ನು ಉದ್ಘಾಟನೆ ಮಾಡಿಸಿದ್ದಾರೆ. “ಪ್ರೀತಿಯಿಂದ ಇಷ್ಟು ಜನ ಗಣ್ಯರು ಬಂದಿದ್ದೀರಿ ಧನ್ಯವಾದಗಳು. ನನ್ನ ಮಗ ಪವನ್ ನನ್ನ ಜೊತೆಯಿದ್ದು ಸಾಕಷ್ಟು ಅನುಭವ ಪಡೆದುಕೊಂಡಿದ್ದಾನೆ. ಈಗ ‘ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಆರಂಭಿಸಿದ್ದಾನೆ.” ಎಂದು ಎಸ್ ನಾರಾಯಣ ಮಾಹಿತಿ ನೀಡಿದ್ದಾರೆ.