ಕಳೆದ 1 ತಿಂಗಳಿನಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ಆಪರೇಷನ್ ಚೀತಾ ಕೊನೆಗೂ ಫೇಲ್ ಆಗಿದೆ. ಇಂದು 30ನೇ ದಿನದ ಕಾರ್ಯಾಚರಣೆ ನಡೆದಿದ್ದು. ಕೊನೆಯ ದಿನ ಕಾರ್ಯಾಚರಣೆ ಎಂಬ ನಿಟ್ಟಿನಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯಿಂದ ಭರ್ಜರಿ ಕೋಂಬಿಂಗ್ ನಡೆದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ.
ಹೌದು ಕುಂದಾನಗರಿ ಬೆಳಗಾವಿಯಲ್ಲಿ ಚಾಲಾಕಿ ಚಿರತೆಯ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಕಳೆದ ಅಗಷ್ಟ 5ರಂದು ಪ್ರತ್ಯಕ್ಷವಾಗಿದ್ದ ಚಿರತೆ ಇಡೀ ಬೆಳಗಾವಿ ಜನತೆಯ ನಿದ್ದೆಗೆಡಿಸಿದೆ.
30 ದಿನಗಳಿಂದ ಆಪರೇಶನ್ ಚೀತಾ ನಡೆಸಿದ್ದ ಅರಣ್ಯ ಇಲಾಖೆ ಇಂದಿಗೆ ಕಾರ್ಯಾಚರಣೆ ಸಮಾಪ್ತಿಗೊಳಿಸಿ ಕೈತೊಳೆದುಕೊಂಡಿದೆ. 11 ದಿನಗಳ ಹಿಂದೆ ಮತ್ತೇ ಪ್ರತ್ಯಕ್ಷವಾಗಿದ್ದ ಚಿರತೆಯನ್ನ ಸೆರೆ ಹಿಡಿಯಲು ಆನೆಗಳನ್ನು ಕರೆ ತಂದು ಕಾರ್ಯಾಚರಣೆ ನಡೆಸಿದ್ರು ಯಾವುದೇ ಪ್ರಯೋಜನವಾಗಿಲ್ಲ.
ಇಂದು ಕೂಡ 200 ಜನ ಅರಣ್ಯ ಸಿಬ್ಬಂದಿ ಹಾಗೂ 100 ಜನ ಪೆÇಲೀಸ್ ಸಿಬ್ಬಂದಿ ಗಜಪಡೆಯೊಂದಿಗೆ ಕೋಂಬಿಗ್ ನಡೆಸಿದ್ರು ಚಿರತೆ ಮಾತ್ರ ಪತ್ತೆಯಾಗಿಲ್ಲ. ಈ ಆಪರೇಶನ್ ಚೀತಾಗೆ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು ಕಾರ್ಯಾಚರಣೆ ಮಾತ್ರ ವಿಫಲವಾಗಿದೆ.ಇಂದಿಗೆ ಚಿರತೆ ಕಾರ್ಯಾಚರಣೆ ಬಹುತೇಕ ಮುಕ್ತಾಯವಾಗಿದ್ದು 16 ಟ್ರ್ಯಾಪ್ ಕ್ಯಾಮರಾ ಹಾಗೂ 8 ಬೋನುಗಳನ್ನ ಗಾಲ್ಫ್ ಮೈದಾನದಲ್ಲೇ ಇಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಒಟ್ಟಿನಲ್ಲಿ 30ನೇ ದಿನದ ಆಪರೇಶನ್ ಚೀತಾ ಫೆಲ್ಯೂರ್ ಆಗಿದೆ. ಒಂದೆಡೆ ಅರಣ್ಯ ಇಲಾಖೆ ಕಾರ್ಯಾಚರಣೆ ನಿಲ್ಲಿಸಿ ಕೈತೊಳೆದುಕೊಂಡಿದ್ರೆ, ಮತ್ತೊಂದೆಡೆ ಜನ ಭಯದಲ್ಲೇ ಬದುಕುವಂತಾಗಿದೆ. ಚಿರತೆ ಕಾಟಕ್ಕೆ ಕೊನೆಗೂ ತೆರೆ ಎಳೆಯದೇ ಅರಣ್ಯ ಇಲಾಖೆ ಶಸ್ತ್ರ ತ್ಯಾಗ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.